ಮುಂಗಾರು ಸಾಂಸ್ಕೃತಿಕ ಹಬ್ಬದಿಂದ ಕಲೆ-ಸಂಸ್ಕೃತಿಗೆ ಮರುಜೀವ

Raichur mungaru habba
ರಾಯಚೂರಿನ ಎಪಿಎಂಸಿ ಆವರಣದಲ್ಲಿ ಮುನ್ನೂರು ಕಾಪು ಸಮಾಜದಿಂದ ಹಮ್ಮಿಕೊಂಡಿದ್ದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನದ ಕಾರ್ಯಕ್ರಮಕ್ಕೆ ಸಂಸದ ಜಿ.ಕುಮಾರ ನಾಯಕ ಚಾಲನೆ ನೀಡಿ ಮಾತನಾಡಿದರು. ಮಾಜಿ ಶಾಸಕ ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಪ್ರಮುಖರಾದ ಜಯಣ್ಣ, ಕೆ.ಶಾಂತಪ್ಪ ಇದ್ದರು.
Published on

ಸಂಸದ ಜಿ.ಕುಮಾರ ನಾಯಕ ಅನಿಸಿಕೆ | ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಚಾಲನೆ

ರಾಯಚೂರು: ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಿಂದ ನಶಿಸಿ ಹೋಗುತ್ತಿರುವ ಗ್ರಾಮೀಣ ಕಲೆ, ಸಂಸ್ಕೃತಿಗೆ ಮರು ಜೀವ ನೀಡುವ ಕಾರ್ಯವಾಗುತ್ತಿದೆ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿದ್ದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಎರಡನೇ ದಿನದ ಸ್ಪರ್ಧೆಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗಿನಿಂದ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಲಾಗುವ ಮುಂಗಾರು ಸಾಂಸ್ಕೃತಿಕ ಹಬ್ಬವನ್ನು ನೋಡಿದ್ದೇನೆ. ಯಾವುದೇ ಲೋಪಗಳಾಗದಂತೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮುನ್ನೂರು ಕಾಪು ಸಮಾಜದಿಂದ ಹೆಚ್ಚಿನ ಬೆಂಬಲ ಸಿಕ್ಕಿದ್ದು, ಸಮಾಜ ಅತೀವ ನಂಬಿಕೆಯಿಂದ ನನ್ನನ್ನು ಗೆಲ್ಲಿಸಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಂಗಾರು ಸಾಂಸ್ಕೃತಿಕ ಹಬ್ಬದ ಮೂಲಕ ರೈತರು, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವಾಗುತ್ತಿದೆ ಎಂದು ಕುಮಾರನಾಯಕ ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಸ್ವಾಮೀಜಿ ಮಾತನಾಡಿ, ಕೃಷಿಗೆ ಉತ್ತೇಜನ ನೀಡುವ ಪಾರಂಪರಿಕ ಕಾರ ಹುಣಿಮೆಯನ್ನು ಜನರನ್ನು ಆಕರ್ಷಿಸುವ ರೀತಿಯಲ್ಲಿ ಆಚರಣೆ ಮಾಡಿ, ರೈತರು, ಕಲಾವಿದರನ್ನು ಸಂತಸಪಡಿಸುವ ಕಾರ್ಯ ಮುನ್ನೂರು ಕಾಪು ಸಮಾಜದಿಂದ ಆಗುತ್ತಿದೆ. ಇದೇ ಕಾರಣಕ್ಕಾಗಿ ಅನ್ಯ ರಾಜ್ಯಗಳಲ್ಲೂ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಛಾಪು ಮೂಡಿಸದೆ ಎಂದರು.

ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಬೇಕಾದರೆ ರೈತರು ಖುಷಿಯಾಗಿರಬೇಕು. ದೇಶದಲ್ಲಿ ಶೇ.60 ಜನ ರೈತರಿದ್ದು, ಪ್ರಸ್ತುತ ದಿನಮಾನಗಳಲ್ಲಿ ರೈತರು ವ್ಯವಸಾಯದಿಂದ ದೂರ ಉಳಿದು ನಗರ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಆದರೆ, ರೈತರು ವ್ಯವಸಾಯವನ್ನು ಮುಂದುವರಿಸಿಕೊಂಡು ಹೋಗುವ ಧೈರ್ಯವನ್ನು ಮುಂಗಾರು ಸಾಂಸ್ಕೃತಿಕ ಹಬ್ಬದ ಮೂಲಕ ನೀಡಲಾಗುತ್ತಿದೆ ಎಂದು ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಸ್ವಾಮೀಜಿ ಹೇಳಿದರು.

ಮಾಜಿ ಶಾಸಕ ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಪ್ರಮುಖರಾದ ರವಿ ಬೋಸರಾಜು, ಜಯಣ್ಣ, ಕೆ.ಶಾಂತಪ್ಪ ಇತರರಿದ್ದರು.

ರಾಯಚೂರಿನ ಎಪಿಎಂಸಿ ಆವರಣದಲ್ಲಿ ಮುನ್ನೂರು ಕಾಪು ಸಮಾಜದಿಂದ ಹಮ್ಮಿಕೊಂಡಿದ್ದ ಮುಂಗಾರು ಸಾಂಸ್ಕೃತಿಕ ಹಬ್ಬದ ಹಿನ್ನೆಲೆಯಲ್ಲಿ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯಿತು.
ರಾಯಚೂರಿನ ಎಪಿಎಂಸಿ ಆವರಣದಲ್ಲಿ ಮುನ್ನೂರು ಕಾಪು ಸಮಾಜದಿಂದ ಹಮ್ಮಿಕೊಂಡಿದ್ದ ಮುಂಗಾರು ಸಾಂಸ್ಕೃತಿಕ ಹಬ್ಬದ ಹಿನ್ನೆಲೆಯಲ್ಲಿ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯಿತು.

ಮೆರವಣಿಗೆಯಲ್ಲಿ ಸಾರ್ವಜನಿಕರ ಗಮನ ಸೆಳೆದ ಕಲಾ ತಂಡಗಳು

ಸಂಜೆ 4 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಮಾತಾ ಲಕ್ಷ್ಮಮ್ಮದೇವಿ ಮೂರ್ತಿ ಹೊತ್ತ ಅಂಬಾರಿ ಹಾಗೂ ಎತ್ತುಗಳ ಬೃಹತ್ ಮೆರವಣಿಗೆ ನಡೆಯಿತು. ವಿವಿಧ ರಾಜ್ಯಗಳಿಂದ ಆಗಮಿಸಿದ್ದ 40 ಕಲಾ ತಂಡಗಳು ಪಾಲ್ಗೊಂಡಿದ್ದವು. ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಹಾಗೂ ಮೆರವಣಿಗೆ ವೀಕ್ಷಿಸಲು ಅಪಾರ ಸಂಖ್ಯೆಯ ಜನ ನಗರದ ಗಂಜ್ ವೃತ್ತದಿಂದ ಬಸವನಬಾವಿ ವೃತ್ತದ ವರೆಗೆ ಸೇರಿದ್ದರು. ಕುದುರೆಯಾಟ, ಡೊಳ್ಳು, ಲಂಬಾಣಿ ನೃತ್ಯ, ಮಹಿಳಾ ತಂಡದಿಂದ ತಮಟೆ ಬಾರಿಸುವುದು, ಮದ್ದಲೆ, ಕರಡಿ ಮಜುಲು, ಶಿವನವತಾರ, ಕುಂಭ ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಜನರ ಗಮನ ಸೆಳೆದವು.

ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಮೆರವಣಿಗೆಯಲ್ಲಿ ಕಲಾ ತಂಡ ಡೊಳ್ಳು ವಾದ್ಯದ ನೃತ್ಯ ಪ್ರದರ್ಶಿಸಿತು.
ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಮೆರವಣಿಗೆಯಲ್ಲಿ ಕಲಾ ತಂಡ ಡೊಳ್ಳು ವಾದ್ಯದ ನೃತ್ಯ ಪ್ರದರ್ಶಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net