

ರಾಯಚೂರು: ಸುಲಭವಾಗಿ ದುಡ್ಡು ಸಿಗುತ್ತದೆ ಎನ್ನುವ ಜನರ ಆಸೆಯೇ ಸೈಬರ್ ಅಪರಾಧಕ್ಕೆ ದಾರಿ ಮಾಡಿಕೊಡುತ್ತಿದ್ದು, ಜನರು ಈ ಬಗ್ಗೆ ಜಾಗೃತರಾಗಿ ವ್ಯವಹಾರ ನಡೆಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಸಲಹೆ ನೀಡಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ರಿಪೋರ್ಟರ್ಸ್ ಗಿಲ್ಡ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಸೈಬರ್ ಅಪರಾಧ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜನರಲ್ಲಿ ಜಾಗೃತಿ ಕೊರತೆಯಿಂದಾಗಿ ವಂಚನೆಗೆ ಒಳಗಾಗುತ್ತಿದ್ದಾರೆ ಎಂದರು. ವಂಚನೆಗೆ ಒಳಗಾದವರಿಗೆ ಹಣ ವಾಪಸ್ ಕೊಡಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆದರೂ ಇಲಾಖೆ ಕಳೆದ ಮೂರು ವರ್ಷಗಳಲ್ಲಿ 17.50 ಲಕ್ಷ ರೂ.ಗಳನ್ನು ವಂಚನೆಗೆ ಒಳಗಾಗಿದ್ದವರಿಗೆ ವಾಪಸ್ ಕೊಡಿಸಿದೆ. ಅಪರಾಧಿಗಳು ದೆಹಲಿ, ಕೊಲ್ಕತಾ, ಮುಂಬೈ ಮುಂತಾದೆಡೆ ಇರುವುದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟ ಎಂದರು.
ಯಾವುದೇ ಘಟನೆ ನಡೆದಾಗ ಪತ್ರಕರ್ತರು, ಪೊಲೀಸರಿಗೆ ವಾಸ್ತವ ಗೊತ್ತಿರುತ್ತದೆ. ಇಬ್ಬರು ಕೈಜೋಡಿಸಿ ಕೆಲಸ ಮಾಡಿದರೆ ಜನರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಾಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯೇ ಚರ್ಚೆಯಾಗಿದ್ದು, ಚರ್ಚೆಯಾದಾಗ ಅಂತರಾಳ ತಿಳಿಯಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸೈಬರ್ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ರಾಜಕುಮಾರ ವಾಜಂತ್ರಿ ಮಾತನಾಡಿ, ಜಗತ್ತಿನಲ್ಲಿ ಸೈಬರ್ ಅಪರಾಧ ವೇಗವಾಗಿ ಬೆಳೆಯುತ್ತಿದ್ದು, ತಂತ್ರಜ್ಞಾನ ಬೆಳೆದಂತೆ ಜನರಿಗೆ ಉಪಯೋಗವಾಗುವುದರ ಜತೆಗೆ ವಂಚಕರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಜನರು ವಂಚನೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ಹಣವನ್ನು ವಾಪಸ್ ಕೊಡಿಸಲು ಸಾಧ್ಯವಾಗಲಿದೆ. ವಿಳಂಬವಾಗಿ ದೂರು ನೀಡಲು ಬರುತ್ತಿರುವುದರಿಂದ ಹಣ ವಾಪಸ್ ಪಡೆಯಲು ಸಮಸ್ಯೆಯಾಗುತ್ತದೆ. ವಂಚನೆಗೆ ಒಳಗಾದವರಲ್ಲಿ ಹೆಚ್ಚಿನವರು ವಿದ್ಯಾವಂತರಾಗಿರುವುದು ಖೇದಕರ. ಅನ್‌ಲೈನ್ ಹಣ ವರ್ಗಾವಣೆ ಅನಿವಾರ್ಯವಾಗಿದ್ದರೂ ಎಚ್ಚರಿಕೆ ವಹಿಸುವುದು ಸೂಕ್ತ. ಎಟಿಎಂ ಪಿನ್, ಒಟಿಪಿ ಹಾಗೂ ಪಾಸ್‌ವರ್ಡ್‌ಗಳನ್ನು ಯಾವುದೇ ಕಾರಣಕ್ಕೂ ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದರು.