

ರಾಯಚೂರು: ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಬಿ.ವಿ.ನಾಯಕ ಪಕ್ಷದ ತೊರೆದು ಬಿಜೆಪಿ ಸೇರಿರುವುದರಿಂದ ಪಕ್ಷಕ್ಕೆ ಯಾವುದೇ ಹಾನಿಯಿಲ್ಲ. ಜಿಲ್ಲಾಧ್ಯಕ್ಷರಾಗಿದ್ದಾಗ ನಿಷ್ಕ್ರಿಯರಾಗಿದ್ದು, ಒಬ್ಬರು ಬಿಟ್ಟು ಹೋದರೆ ಏನೂ ಆಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ದುರಾಡಳಿತ, ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಸಾಮಾಜಿಕ ನ್ಯಾಯ ಕಾಪಾಡಲು ಸಾಮಾನ್ಯ ಕಾರ್ಯಕರ್ತರಾಗಿರುವ ಮಹ್ಮದ್ ಶಾಲಂಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ನಗರಸಭೆ ಸಭೆ ಸದಸ್ಯನಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲಿ ರಾಯಚೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಸನಗೌಡ ದದ್ದಲ್‌ಗೆ ಟಿಕೆಟ್ ನೀಡಿದಾಗ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಕಾಂಗ್ರೆಸ್ ಡಮ್ಮಿ ಅಭ್ಯರ್ಥಿ ಹಾಕಿದೆ ಎಂಬ ಆರೋಪ ಕೇಳಿಬಂದಿದ್ದವು. ಆದರೆ ಅತಿ ಹೆಚ್ಚಿನ ಮತಗಳ ಅಂತರದಿಂದ ದದ್ದಲ್ ಗೆಲ್ಲುವ ಮೂಲಕ ಎಲ್ಲರ ನಿರೀಕ್ಷೆ ಸುಳ್ಳು ಮಾಡಿದ್ದರು. ಈಗಲೂ ಮಹ್ಮದ್ ಶಾಲಂಗೆ ಟಿಕೆಟ್ ನೀಡಿರುವುದಕ್ಕೆ ಡಮ್ಮಿ ಅಭ್ಯರ್ಥಿ ಹಾಕಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಪಕ್ಷ ಸಂಘಟನೆ ಬಲವಾಗಿದ್ದು, ಯಾರೇ ಅಭ್ಯರ್ಥಿಗಳಿರಲಿ ಗೆಲ್ಲಿಸಿಕೊಂಡು ಬರುವ ಶಕ್ತಿ ನಮ್ಮ ಪಕ್ಷದ ಕಾರ್ಯಕರ್ತರಿಗಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲು ನಗರಕ್ಕೆ ಆಗಮಿಸಲಿದ್ದು, ಸಂಜೆ 6ಕ್ಕೆ ಬಸವೇಶ್ವರ ವೃತ್ತದ ಬಳಿಯಿರುವ ವಾಲ್ಕಾಟ್ ಮೈದಾನದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ ಎಂದು ರವಿ ಬೋಸರಾಜು ಹೇಳಿದರು.
ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹ್ಮದ್ ಶಾಲಂ ಮಾತನಾಡಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆ ನಡೆಸಲಿ. ತಪ್ಪಿತಸ್ಥರು ಯಾರೆಂದು ಗೊತ್ತಾಗುತ್ತದೆ ಎಂದು ಹೇಳಿದರು. ಪ್ರಮುಖರಾದ ರುದ್ರಪ್ಪ ಅಂಗಡಿ, ಹರಿಬಾಬು ಇದ್ದರು.