

ರಾಯಚೂರು: ಚುನಾವಣೆ ಹತ್ತಿರವಿರುವಾಗ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆಪ್‌ನ ಉಚಿತ ವಿದ್ಯುತ್, ಮಹಿಳೆಯರು ಮತ್ತು ನಿರುದ್ಯೋಗಗಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಗಳನ್ನು ಕದ್ದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ ಎಂದು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾರಿಗೊಳಿಸದ ಯೋಜನೆಗಳ ಬಗ್ಗೆ ಈಗ ಭರವಸೆ ನೀಡುತ್ತಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯವಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೊರಹೊಮ್ಮಿದ್ದಾರೆ ಎಂದರು.
ಜನರು ನೀಡುವ ತೆರಿಗೆ ಹಣವನ್ನು ಸಮಪರ್ಕವಾಗಿ ಬಳಸಿಕೊಳ್ಳಲು ವಿಲವಾಗಿರುವ ಪ್ರಮುಖ ಪಕ್ಷಗಳು ಇದೀಗ ಜನರಿಗೆ ಭರವಸೆ ನೀಡುತ್ತಿವೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಆಮ್ ಅದ್ಮಿ ಏನು ಮಾಡಿದೆ ಎಂಬದು ಜನರಿಗೆ ಗೊತ್ತಾಗಿದೆ. ರಾಜ್ಯದಲ್ಲಿ ಜನರು ಬದಲಾವಣೆ ಬಯಸಿದ್ದಾರೆ.
ಕಾಂಗ್ರೆಸ್ ಶಾಸಕರು ಲಂಚ ಸ್ವೀಕರಿಸುತ್ತಿರುವುದು ಬಯಲಾಗಿದೆ. ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ರಾಹುಲ್ ಗಾಂಧಿ ಸದಸ್ಯತ್ವ ಅನರ್ಹಗೊಳಿಸಿರುವುದು ದುರುದ್ದೇಶದಿಂದ ಕೂಡಿದೆ. 70ಕ್ಕೂ ಹೆಚ್ಚು ಶಾಸಕರು ಸೇರಿ ಹಲವರು ಮಾನಹಾನಿ ಪ್ರಕರಣ ಎದುರಿಸುತ್ತಿದ್ದಾರೆ. ಅವರಿಗೆಲ್ಲ ಆಗದಿರುವ ಶಿಕ್ಷೆಯನ್ನು ರಾಹುಲ್ ಗಾಂಧಿ ಮೇಲೆ ಅನುಸರಿಸಿರುವುದು ಖಂಡನೀಯ.
ಚುನಾವಣೆ ಹೊಸ್ತಿಲಲ್ಲಿ ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿ ಉಳಿದ ಸಮುದಾಯಗಳಿಗೆ ಮೀಸಲಾತಿ ನಿಗದಿಪಡಿಸಿ ಸಚಿವ ಸಂಪುಟ ತೀರ್ಮಾನ ಕೈಗೊಂಡಿರುವುದು ಅವೈಜ್ಞಾನಿಕವಾಗಿದೆ. ಕಾಂತರಾಜ್ ಆಯೋಗ ನೀಡಿರುವ ವರದಿಯನ್ನು ಅಂಗೀಕರಿಸದೆ ಜಾತಿವಾರು ಸಮೀಕ್ಷೆಯ ಅಂಕಿ-ಸಂಖ್ಯೆಗಳಿಲ್ಲದೆ ಮೀಸಲಾತಿ ನಿಗದಿ ಮಾಡುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು. ಪ್ರಮುಖರಾದ ಸುಭಾಷ್‌ಚಂದ್ರ ಸಂಭಾಜಿ, ರುದ್ರಯ್ಯ ನವಲಿ ಹಿರೇಮಠ, ಡಿ.ವೀರೇಶಕುಮಾರ, ಬಸವರಾಜ ಗುತ್ತೇದಾರ, ವಿಜಯ ಶರ್ಮ ಇದ್ದರು.