ಹೊಸ ನೀತಿಯಿಂದ ಶಿಕ್ಷಣ ವ್ಯವಸ್ಥೆ ಸದೃಢ ಎಂದ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ

11092021 Raichur Teachers day
Published on

ರಾಯಚೂರು: ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ವ್ಯವಸ್ಥೆ ಬದಲಾವಣೆಯಾಗುವ ಜತೆಗೆ ಶೈಕ್ಷಣಿಕವಾಗಿ ಮತ್ತಷ್ಟು ಸದೃಢವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದರು.

ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದೆ ಎಂದರು.

ಡಾ.ಎಸ್.ರಾಧಾಕೃಷ್ಣನ್ ಶಿಕ್ಷಕರಾಗಿ, ಉಪ ರಾಷ್ಟ್ರಪತಿಗಳಾಗಿ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಹುಟ್ಟುಹಬ್ಬದ ನೆನಪಿಗಾಗಿ ಶಿಕ್ಷಕರ ದಿನಾಚರಣೆ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ಶಿಕ್ಷಣ ವ್ಯವಸ್ಥೆ ಸುಧಾರಣೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ಕೋವಿಡ್‌ನಿಂದ ಎರಡು ವರ್ಷಗಳಿಂದ ಶಾಲೆ, ಕಾಲೇಜುಗಳು ನಡೆಯದಂತಾಗಿದ್ದು, ಕೋವಿಡ್ ಸಂದರ್ಭದಲ್ಲೂ ಶಿಕ್ಷಕರು ಸೇವೆ ಸಲ್ಲಿಸುವ ಮೂಲಕ ಮಕ್ಕಳ ಹಿತ ಕಾಪಾಡಿದ್ದಾರೆ. ಶಿಕ್ಷಕರು ಜನರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ನಮೋಶಿ ಹೇಳಿದರು.

ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ನಾನು ಉನ್ನತ ಸ್ಥಾನಕ್ಕೇರಲು ನನಗೆ ಅಕ್ಷರ ಕಲಿಸಿದ ಗುರುಗಳೇ ಕಾರಣರಾಗಿದ್ದಾರೆ. ಅದರಂತೆ ಪ್ರತಿಯೊಬ್ಬ ವ್ಯಕ್ತಿ ಸಾಧನೆಯ ಹಿಂದೆ ಶಿಕ್ಷಕರ ಪ್ರೇರಣೆ ಇರುತ್ತದೆ. ಸ್ಪರ್ಧಾತ್ಮಕವಾಗಿ ಬೆಳೆಯುತ್ತಿರುವ ಶಿಕ್ಷಣ ಕ್ಷೇತ್ರಕ್ಕೆ ತಕ್ಕಂತೆ ಶಿಕ್ಷಕರು ಹೆಜ್ಜೆಯಿಡಬೇಕಾಗಿದೆ ಎಂದರು.

ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಮಾತನಾಡಿದರು. ಈ ಸಂದರ್ಭ 15 ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರಸಭೆ ಅಧ್ಯಕ್ಷ ಇ.ವಿನಯಕುಮಾರ, ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಡಿಡಿಪಿಐ ವೃಷಭೇಂದ್ರಯ್ಯ, ಡಿಯಟ್ ಪ್ರಾಚಾರ್ಯ ರಾಮಚಂದ್ರಪ್ಪ ಶಿವಂಗಿ, ಬಿಇಒ ಚಂದ್ರಶೇಖರ ದೊಡ್ಡಮನಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ರೆಡ್ಡಿ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಯಂಕಪ್ಪ ಫಿರಂಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net