ಜಗಜೀವನರಾಮ್ ತತ್ವಾದರ್ಶ ಅಳವಡಿಸಿಕೊಳ್ಳಿ; ಶಾಸಕ ಡಾ.ಶಿವರಾಜ ಪಾಟೀಲ್ ಸಲಹೆ

05042022 Raichur Dr Babu Jagjivanaraman Jayanthi
Published on

ರಾಯಚೂರು: ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್‌ರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕು ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.

ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಸಿರು ಕ್ರಾಂತಿ ಮೂಲಕ ದೇಶದಲ್ಲಿ ಕೃಷಿ ಕ್ಷೇತ್ರವನ್ನು ಸದೃಢಗೊಳಿಸಲು ಪ್ರಯತ್ನಿಸಿದ ಕೀರ್ತಿ ಜಗಜೀವನರಾಮ್‌ಗೆ ಸಲ್ಲುತ್ತದೆ. ಐಎಎಸ್, ಐಪಿಎಸ್‌ನಲ್ಲಿ ರ‌್ಯಾಂಕ್ ಪಡೆದವರಿಗೆ ವೈಯಕ್ತಿವಾಗಿ 25 ಸಾವಿರ ರೂ. ನೀಡಲಾಗುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಬರೆಯಲು ಹೆಚ್ಚಿನ ತಯಾರಿ ನಡೆಸಿಕೊಳ್ಳುವಂತೆ ಸಲಹೆ ನೀಡಿದರು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ದೇಶದಲ್ಲಿ ಅಸ್ಪಶ್ಯತೆ ಹೋಗಲಾಡಿಸಿ ಸಮಾನತೆ ತರಲು ಜಗಜೀವನರಾಮ್ ಕೊಡುಗೆ ಅಪಾರ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶವನ್ನು ಸದೃಢಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ನಗರದ ಸ್ಟೇಷನ್ ವೃತ್ತದಲ್ಲಿರುವ ಡಾ.ಬಾಬು ಜಗಜೀವನರಾಮ್ ಪುತ್ಥಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾಲಾರ್ಪಣೆ ಮಾಡಿದರು. ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ಆರ್‌ಡಿಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಡಿಸಿ ಡಾ.ಅವಿನಾಶ ಮೆನನ್, ಜಿಪಂ ಸಿಇಒ ನೂರ್ ಜಹರಾ ಖಾನಂ, ಎಸ್ಪಿ ಬಿ.ನಿಖಿಲ್, ಎಡಿಸಿ ಕೆ.ಆರ್.ದುರಗೇಶ, ಪೌರಾಯುಕ್ತ ಕೆ.ಮುನಿಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net