ಶಾಮನೂರು ಶಿಸ್ತುಬದ್ಧ ರಾಜಕಾರಣಿ; ಸಚಿವ ಎನ್.ಎಸ್.ಬೋಸರಾಜು ಹೇಳಿಕೆ

raichur minister ns bosaraju
ರಾಯಚೂರಿನ ಮುಗಳಖೋಡ ಮಠದ ಆವರಣದಲ್ಲಿ ಶಾಮನೂರು ಶಿವಶಂಕರಪ್ಪ ಜನ್ಮದಿನದ ನಿಮಿತ್ತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಸಚಿವ ಎನ್.ಎಸ್.ಬೋಸರಾಜು ಸಸಿ ನೆಟ್ಟು ನೀರು ಹಾಕಿ ಚಾಲನೆ ನೀಡಿದರು. ಶ್ರೀ ವೀರಭದ್ರ ಶಿವಾಚಾರ್ಯರು, ಶ್ರೀ ಶಾಂತಮಲ್ಲ ಶಿವಾಚಾರ್ಯರು, ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯರು, ಡಾ.ಪಂಚಾಕ್ಷರಿ ಶಿವಾಚಾರ್ಯರು, ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಇದ್ದರು.
Published on

ಜನ್ಮದಿನದ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ


ರಾಯಚೂರು: ನೇರ-ದಿಟ್ಟ ನುಡಿಯ ಶಾಮನೂರು ಶಿವಶಂಕರಪ್ಪ ಯಾವ ಒತ್ತಡಕ್ಕೂ ಮಣಿಯದೆ ಇಲ್ಲಿಯವರೆಗೂ ತಮ್ಮ ಶಿಸ್ತುಬದ್ಧ ಜೀವನದ ಮೂಲಕ ಆದರ್ಶ ರಾಜಕಾರಣಿಯಾದ್ದಾರೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.

ಸ್ಥಳೀಯ ಮುಗಳಖೋಡ ಮಠದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಶಾಮನೂರು ಶಿವಶಂಕರಪ್ಪ ಜನ್ಮದಿನ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜಕೀಯವೇ ಇರಲಿ, ಶಿಕ್ಷಣ ಮತ್ತು ವ್ಯಾಪಾರ ವಹಿವಾಟು ಇರಲಿ. ಎಲ್ಲದರಲ್ಲೂ ಆರೋಗ್ಯಕರವಾದ ಹಳೆಯ ವ್ಯವಸ್ಥಿತ ಪದ್ಧತಿಯನ್ನು ಶ್ಯಾಮನೂರು ಮುಂದುವರಿಸಿಕೊಂಡು ಬಂದಿದ್ದು, ಅವರ ಜೀವನ ಇತರರಿಗೆ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.

ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಾಮನೂರು ಶಿಸ್ತು, ದಕ್ಷತೆ ಮೂಲಕ ಅಚ್ಚುಕಟ್ಟಾದ ಜೀವನದ ನಿಲುವು ಹೊಂದಿದ್ದು, ಸಕ್ರಿಯ ರಾಜಕಾರಣದಲ್ಲಿದ್ದರೂ ಸಂಸ್ಕೃತಿ, ಸಂಸ್ಕಾರವನ್ನು ಮರೆಯದೆ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ ಎಂದರು.

ಬಿಚ್ಚಾಲಿಯ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಿಸಿಲನಾಡಿನಲ್ಲಿ ಹೆಚ್ಚು ಗಿಡಮರಗಳನ್ನು ನೆಡಬೇಕಾಗಿದ್ದು, ಈ ನಿಟ್ಟಿನಲ್ಲಿ ಮಹಾಸಭೆ ಕಾರ್ಯ ಶ್ಲಾಘನೀಯವಾಗಿದೆ. ಎನ್.ಎಸ್.ಬೋಸರಾಜುಗೆ ಸಚಿವ ಸ್ಥಾನ ನೀಡಿರುವುದು ಅವರ ಪಕ್ಷ ನಿಷ್ಠೆ ಮತ್ತು ಜನಸೇವೆ ಕಾರಣವಾಗಿದೆ. ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ದೊರೆಯಲಿ ಎಂದರು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ನೀಲಗಲ್‌ನ ಡಾ.ಶ್ರೀ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಮಹಾಸಭಾ ಪದಾಧಿಕಾರಿಗಳಾದ ಸಿದ್ಧನಗೌಡ ಪಾಟೀಲ್, ಡಾ.ಪರಮೇಶ್ವರ ಸಾಲಿಮಠ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net