ರಾಯಚೂರಲ್ಲಿ ಏ.4, 5 ರಂದು ಬೃಹತ್ ಉದ್ಯೋಗ ಮೇಳ : ಡಿಸಿ ಆರ್.ವೆಂಕಟೇಶ ಕುಮಾರ ಮಾಹಿತಿ

090320 Raichur Massive Job Fair Website release
Published on

ರಾಯಚೂರು: ಜಿಲ್ಲೆಯ ನಿರುದ್ಯೋಗಿ ವಿದ್ಯಾವಂತ ಯುವಕರ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದಲೇ ಏಪ್ರಿಲ್ 4 ಹಾಗೂ 5 ರಂದು ಕೃಷಿ ವಿಜ್ಞಾನಗಳ ವಿವಿ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.

ಉದ್ಯೋಗ ಮೇಳದ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್‌ನ್ನು ಸೋಮವಾರ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಎರಡು ದಿನದ ಉದ್ಯೋಗ ಮೇಳದಲ್ಲಿ 150ಕ್ಕೂ ಅಧಿಕ ವಿವಿಧ ಖಾಸಗಿ ಕಂಪನಿಗಳು ಭಾಗಿಯಾಗಲಿದ್ದು, ಜಿಲ್ಲೆಯ 8 ಸಾವಿರ ಅಭ್ಯರ್ಥಿಗಳು ಹಾಜರಿಯಾಗುವ ನಿರೀಕ್ಷೆ ಇದೆ ಎಂದರು.

ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ, ನರ್ಸಿಂಗ್ ಕೋರ್ಸ್, ವಿವಿಧ ತಾಂತ್ರಿಕ ವಿದ್ಯಾಭ್ಯಾಸ ಮಾಡಿದ ಪಾಸ್ ಅಥವಾ ಫೇಲ್ ಆದವರೂ ಸಹಿತ ರಾಯಚೂರು ಉದ್ಯೋಗ ಮೇಳ ಡಾಟ್‌ಕಾಮ್ ಎನ್ನುವ ವೆಬ್‌ಸೈಟ್‌ಲ್ಲಿ ಅಥವಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು 18ರಿಂದ 35ವರ್ಷದೊಳಗಿರುವ ಎಲ್ಲ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಉದ್ಯೋಗ ಮೇಳದ ದಿನವೂ ಸಹಿತ ಆಫ್‌ಲೈನನಲ್ಲಿ ನೋಂದಾಯಿಸುವ ಅನುಕೂಲ ಮಾಡಲಾಗಿದೆ. ವೆಬ್‌ಸೈಟಲ್ಲಿ ಇರುವ ಅರ್ಜಿ ಪಡೆದು ಭರ್ತಿ ಮಾಡಿ ಅಪ್ಲೋಡ್ ಮಾಡಬೇಕು. ಉದ್ಯೋಗ ಮೇಳಕ್ಕೆ ಬರುವ ಸಂದರ್ಭ ಸ್ವವಿವರವುಳ್ಳ 20 ರೆಸ್ಯೂಮ್ ಪ್ರತಿಗಳನ್ನು ತರಬೇಕು. ಕೆಲ ಕಂಪನಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮಾಡುವ ಹಿನ್ನೆಲೆಯಲ್ಲಿ ಎರಡು ಕೋಠಡಿಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ 240182, 8095050436, 9880336850 ಗೆ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಿಇಒ ಜಿ.ಲಕ್ಷ್ಮೀಕಾಂತರಡ್ಡಿ, ಎಡಿಸಿ ದುರಗೇಶ, ಎಸಿ ಸಂತೋಷ ಕಾಮಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net