ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದುಪಡಿಸುವಂತೆ ಕನ್ನಡಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ

25112020 Raichur Kannada worker protest
Published on

ರಾಯಚೂರು: ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕನ್ನಡಪರ ಸಂಘಟನೆಗಳ ಒಕ್ಕೂಟ ಬುಧವಾರ ಪ್ರತಿಭಟನೆ ನಡೆಸಿತು.

ಬಳಿಕ ತಹಸೀಲ್ದಾರ್ ಡಾ.ಹಂಪಣ್ಣಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿರುವ ಮರಾಠಿಗರು ಕನ್ನಡಿಗರಾಗಿದ್ದು, ಪ್ರತ್ಯೇಕ ಪ್ರಾಧಿಕಾರ ರಚನೆಯಿಂದ ಮರಾಠಿಗರೂ ಹಾಗೂ ಕನ್ನಡಿಗರ ಮಧ್ಯೆ ದ್ವೇಷ ಹುಟ್ಟುಹಾಕಿದಂತಾಗಲಿದೆ. ಕೂಡಲೇ ಪ್ರಾಧಿಕಾರ ರದ್ದುಗೊಳಿಸಬೇಕು. ಮರಾಠಿಗರು ಕೇಳದಿದ್ದರೂ ಸರ್ಕಾರ ಅವರ ಓಲೈಕೆಗಾಗಿ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 50 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಆದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ 5 ಕೋಟಿ ರೂ.ನೀಡುವ ಮೂಲಕ ಕನ್ನಡ ಬಗ್ಗೆ ಸರ್ಕಾರಕ್ಕಿರುವ ಧೋರಣೆ ತೋರಿಸಿಕೊಟ್ಟಿದೆ. ಕನ್ನಡಪರ ಸಂಘಟನೆಗಳ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರು ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದರಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಪದಾಧಿಕಾರಿಗಳಾದ ಅಶೋಕಕುಮಾರ ಜೈನ್, ಶಿವಕುಮಾರ ಯಾದವ್, ವೀರೇಶ ಹೀರಾ, ಶರಣಪ್ಪ ಅಸ್ಕಿಹಾಳ, ವೆಂಕಟರೆಡ್ಡಿ, ಖಲೀಲ್ ಪಾಷಾ, ಹುಸೇನ್ ಬಾಷಾ, ಎಚ್.ಕೆ.ರವಿ, ಎಚ್.ಅಶೋಕ ಶೆಟ್ಟಿ, ಡಿ.ವೀರೇಶ, ಎಂ.ಡಿ.ರಫೀಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net