

ಮಾನ್ವಿ: ಪಟ್ಟಣದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಗುರುಸಾರ್ವಭೌಮರ 351 ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಹಿನ್ನೆಲೆಯಲ್ಲಿ ಭಾನುವಾರ ರಥೋತ್ಸವ ನಡೆಯಿತು.
ಶ್ರೀಮಠದಲ್ಲಿ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಪಾರಾಯಣ, ಫಲಪಂಚಾಮೃತಾಭಿಷೇಕ, ಕನಕಾಭಿಷೇಕ, ಅರ್ಚನೆ, ಅಲಂಕಾರ, ಹಸ್ತೋದಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಶ್ರೀಗುರು ರಾಯರ ಮೃತಿಕಾ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಉತ್ಸವ ಮೂರ್ತಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಪಲ್ಲಕಿಯಲ್ಲಿಟ್ಟು ಪ್ರದಕ್ಷಿಣೆ ಮಾಡಲಾಯಿತು. ಭಕ್ತರು ಪರಸ್ಪರ ಗುಲಾಲು ಎರಚುವ ಮೂಲಕ ಸಂಭ್ರಮಿಸಿದರು.
ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಶಾಸಕ ರಾಜಾ ವೆಂಕಟಪ್ಪ ನಾಯಕ, ಗೌರವ ವಿಚಾರಣಾಕರ್ತ ಮುದ್ದುರಂಗರಾವ್ ಮುತಾಲಿಕ್, ಶಾಖಾ ವ್ಯವಸ್ಥಾಪಕ ರಾಘವೇಂದ್ರ ರಾವ್ ದೇಸಾಯಿ, ವಿಜಯಾಚಾರ್ಯ ಇಬ್ರಾಂಪುರ, ಕೃಷ್ಣಮೂರ್ತಿ ಜೋಶಿ, ರವಿ ಅಚಾರ್ಯ, ಹನುಮೇಶಾಚಾರ್ಯ, ರಾಘವೇಂದ್ರಾಚಾರ್ ಅರ್ಚಕ, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ಶಿಕ್ಷಕ ಮಹಾದೇವಪ್ಪ ಇತರರು ಇದ್ದರು,