

ರಾಯಚೂರು: ಮಂತ್ರಾಲಯ ಶ್ರೀಮಠದಲ್ಲಿ ಆ.18ರಿಂದ 24ರವರೆಗೆ ರಾಯರ ಆರಾಧನಾ ಮಹೋತ್ಸವ ಜರುಗಲಿದ್ದು, ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಮಠದಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.
ಮಂತ್ರಾಲಯದ ಶ್ರೀಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವವು ಶ್ರೀಮಠದಲ್ಲಿ ಆ.18ರಿಂದ 24ರವರೆಗೆ ಜರುಗಲಿದೆ ಎಂದು ತಿಳಿಸಿದರು.
ಆ.18ರಂದು ಟಿಟಿಡಿಯಿಂದ ಶ್ರೀ ಶ್ರೀನಿವಾಸ ದೇವರ ವಸ್ತ್ರ ಸಮರ್ಪಣೆ ಕಾರ್ಯಕ್ರಮ ಜರುಗುವುದು. ಸಂಜೆ ಧ್ವಜಾರೋಹಣ, ಪ್ರಾರ್ಥನೋತ್ಸವ, ಪ್ರಭ ಉತ್ಸವ, ಧನ್ಯೋತ್ಸವ ಕಾರ್ಯಕ್ರಮ ಹಾಗೂ ಪ್ರವಚನ ಜರುಗಲಿದೆ ಎಂದರು.
19ರಂದು ಋಗ್ವೇಧ ನಿತ್ಯ ನೂತನ ಉಪಕ್ರಮ, ಯಜುರ್ವೇಧ ನಿತ್ಯ ನೂತನ ಉಪಕ್ರಮ ಜರುಗಲಿದೆ. ಕರ್ನಾಟದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ಮಂತ್ರಾಲಯ ಮಠದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ಆಗಮಿಸಲಿದ್ದಾರೆ. ಜತೆಗೆ ಕೇಂದ್ರ ಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಸೇರಿದಂತೆ ಇನ್ನಿತರ ಕೇಂದ್ರ ಸಚಿವರು ಹಾಗೂ ರಾಜ್ಯ ಮಂತ್ರಿಗಳು ಮಹೋತ್ಸವಕ್ಕೆ ಆಗಮಿಸಲಿದ್ದಾರೆ ಎಂದರು.
ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಮಠಕ್ಕೆ ಆಗಮಿಸಿ ಐದು ದಿನಗಳ ವರೆಗೆ ಮಠದಲ್ಲಿ ಜರುಗುವುದು ಆರಾಧನಾ ಸೇವೆಗಳಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿಯ ಆರಾಧನಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಈ ನಿಟ್ಟಿನಲ್ಲಿ ಶ್ರೀಮಠ ಎಲ್ಲ ರೀತಿಯ ಸಿದ್ಧತೆ ಕೈಗೊಂಡಿದೆ ಎಂದರು.
ಆ.20ರ ಪೂರ್ವಾರಾಧನೆ ದಿನದಂದು ಮಠದ ಪ್ರತಿಷ್ಠಿತ ಪ್ರಶಸ್ತಿಯಾದ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಯೋಗೀಂಧ್ರತೀರ್ಥರ ಸಭಾಭವನದಲ್ಲಿ ಪ್ರಧಾನ ಮಾಡಲಾಗುತ್ತದೆ. ಬಿಜಿಎಸ್, ಎಸ್ಜೆಬಿಐಟಿ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ ಸ್ವಾಮೀಜಿ, ವಿದ್ವಾಂಸರಾದ ರಘುಪತಿ ಉಪಾಧ್ಯಾಯರು ಹಾಗೂ ವಾರಣಾಸಿಯ ವ್ರಜಭೂಷಣಾ ಓಜಾ ಅವರು ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ವಿಶೇಷವಾಗಿ ಈ ಬಾರಿ ಮೈಸೂರು ರಾಜಮನೆತನದ ರಾಜರು ಹಾಗೂ ಮೈಸೂರು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಅವರು ಶ್ರೀಮಠಕ್ಕೆ ಆಗಮಿಸಲಿದ್ದು, ಅವರಿಗೂ ಕೂಡ ಆ.22ರಂದು ರಥೋತ್ಸವದ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಆ.21ರಂದು ಮಧ್ಯಾರಾಧನೆ, 22ರಂದು ಉತ್ತರಾರಾಧನೆ, 23ಕ್ಕೆ ಅಶ್ವ ವಾಹನ ಉತ್ಸವ, 24ಕ್ಕೆ ಸರ್ವಸಮರ್ಪಣಾ ಉತ್ಸವ ಜರುಗಲಿದೆ ಎಂದು ಹೇಳಿದರು.
ಕುಡಿಯುವ ನೀರು, ಶೌಚಾಲಯದಂತಹ ಮೂಲಭೂತ ಸೌಕರ್ಯಗಳು, ವಿದ್ಯುತ್ ವ್ಯತ್ಯಯವಾದಾಗ ಪರ್ಯಾಯ ವಿದ್ಯುತ್ ವ್ಯವಸ್ಥೆಯನ್ನು ಮಾಡಲಾಗಿದೆ. ಜತೆಗೆ ಭದ್ರತೆ ಹಾಗೂ ನೈರ್ಮಲ್ಯದ ಬಗ್ಗೆ ವಿಶೇಷ ಗಮನಹರಿಸಲಾಗಿದೆ ಎಂದರು.
ಇದನ್ನೂ ಓದಿ: ತಪ್ತ ಮುದ್ರಾ ಧಾರಣ
ಆರಾಧನಾ ಮಹೋತ್ಸವದ ಅಂಗವಾಗಿ ಭಕ್ತರಿಗಾಗಿ ಹಲವೆಡೆ ತಾತ್ಕಾಲಿಕ ಶೌಚಾಲಯ ಹಾಗೂ ಹೆಚ್ಚುವರಿ ಶೌಚಾಲಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಾಘವೇಂದ್ರ ಜಲ ಪ್ರಸಾದ ಎಂಬ ಹೆಸರಿನಡಿ ಬೃಹತ್ ಜಲಶೋಧನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಘಟಕಗಳ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ವಯೋವೃದ್ಧರಿಗೆ, ದಿವ್ಯಾಂಗರಿಗೆ ಪ್ರತ್ಯೇಕ ದರ್ಶನದ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಹಾಗೂ ವೀಲ್ ಚೇರ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ದಿನದ 24 ಗಂಟೆ ಉಚಿತ ವೈದ್ಯಕೀಯ ಸೇವೆ, ಆಂಬುಲೆನ್ಸ್ ವ್ಯವಸ್ಥೆ,ಮಾಡಲಾಗಿದೆ. ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ರಾಜ್ಯದಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮಂತ್ರಾಲಯದ ಶ್ರೀ ರಾಘವೇಂದ್ರ ವೃತ್ತವನ್ನು ನವೀಕರಿಸಲಾಗಿದೆ. ಮತ್ತು ವೃತ್ತದಲ್ಲಿರುವ ರಾಘವೇಂದ್ರ ಸ್ವಾಮಿ ಶಿಲಾಮಂಟಪದ ಗೋಪುರಕ್ಕೆ ಚಿನ್ನದ ಲೇಪನ ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ರಾಯರ ಆರಾಧನಾ ಮಹೋತ್ಸವ 20ರಿಂದ
ಆರಾಧನಾ ಮಹೋತ್ಸವದ ಹಿನ್ನೆಲೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಶ್ರೀಮಠ ಕೈಗೆತ್ತಿಕೊಂಡಿದ್ದು, ತುಳಸಿವನದ ಪಕ್ಕದಲ್ಲಿ ಅತಿಥಿ ಶ್ರೀಪಾದಂಗಳವರು ತಂಗಲು ಹಾಗೂ ಪೂಜಾರಾಧನೆಗೆ ಗುರುನಿವಾಸ ಭವನವನ್ನು ನಿರ್ಮಿಸಲಾಗಿದೆ. ಶೀಘ್ರವೇ ಉದ್ಘಾಟಿಸಲಾಗುವುದು. ಮಂತ್ರಾಲಯ ಮಠದ ಭಕ್ತರ ವಿಶೇಷ ಆಕರ್ಷಣೆಯಾದ ಮಠದ ಮುಂಭಾಗದ ಕಾರಿಡಾರ್ ವಿಸ್ತರಣೆ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಈ ವಿಸ್ತರಿಸಿದ ಕಾರಿಡಾರ್ ಉದ್ಘಾಟನೆಗೊಳ್ಳಲಿದೆ ಎಂದರು.
ಶ್ರೀಮಠದ ಭಕ್ತರು ಈಗಾಗಲೇ ಸುವರ್ಣಲೇಪಿತ ಗೋಪುರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಮಠದ ಸುತ್ತಲು ಸುವರ್ಣ ಅಲಂಕಾರಕ್ಕೆ ಭಕ್ತರು ಮುಂದಾಗಿದ್ದು, ಮುಂಭಾಗದಲ್ಲಿ ಈಗಾಗಲೇ ಕಾರ್ಯ ಮುಗಿದಿದ್ದು, ಆ.19ಕ್ಕೆ ಉದ್ಘಾಟನೆಗೊಳ್ಳಲಿದೆ. ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಹಾಗೂ ಸುವ್ಯವಸ್ಥಿತವಾಗಿ ಆರಾಧನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.