

ರಾಯಚೂರು: ರಂಗಭೂಮಿ ಕಲೆ ಮನುಷ್ಯನ ವ್ಯಕ್ತಿತ್ವ ಹೆಚ್ಚಿಸುವುದರ ಜತೆಗೆ ಆತನಲ್ಲಿ ಆತ್ಮವಿಶ್ವಾಸವ ತುಂಬುವ ಕೆಲಸ ಮಾಡುತ್ತಿದ್ದು, ಪರಿಪೂರ್ಣತೆಯಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಾಗ ಸಿಗುವ ಆತ್ಮಾನುಭೂತಿ ಬೇರೆಲ್ಲೂ ಸಿಗಲ್ಲ ಎಂದು ಹಿರಿಯ ರಂಗಕರ್ಮಿ ವಿ.ಎನ್.ಅಕ್ಕಿ ಅಭಿಪ್ರಾಯಪಟ್ಟರು.
ಕನ್ನಡ ಭವನದಲ್ಲಿ ಬಸವ ಬ್ರಿಗೇಡ್ ಹಾಗೂ ಬೆಂಗಳೂರಿನ ಕರ್ನಾಟಕ ಬೀದಿನಾಟಕ ಅಕಾಡೆಮಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಿಜಿಕೆ ಬೀದಿ ರಂಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿಜಿಕೆ ರಂಗಭೂಮಿಗೆ ಪುನಶ್ಚೇತನ ನೀಡುವುದರ ಜತೆಗೆ ಹೊಸ ಆಯಾಮ ನೀಡಿದ ವ್ಯಕ್ತಿಯಾಗಿದ್ದಾರೆ ಎಂದರು. ಜಿಲ್ಲೆಯಲ್ಲಿ ರಂಗಭೂಮಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ನಿರಂತರವಾಗಿ ರಂಗ ಚಟುವಟಿಕೆಗಳು ನಡೆಯುತ್ತಿರುತ್ತವೆ. ಸಣ್ಣ ವಯಸ್ಸಿನಲ್ಲೇ ಪ್ರವೀಣರೆಡ್ಡಿ ರಂಗಭೂಮಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ‘ಜಿಲ್ಲೆಯಲ್ಲಿ ಕಲಾ ಪ್ರತಿಭೆಗಳಿದ್ದು, ಅವರಿಗೆ ಪ್ರೋತ್ಸಾಹ ದೊರೆಯುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.ಈಶ್ವರೀಯ ವಿಶ್ವವಿದ್ಯಾಲಯದ ಸ್ಮೀತಾ ಅಕ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ರಂಗಕರ್ಮಿ ಪ್ರವೀಣ ರೆಡ್ಡಿ ಗುಂಜಳ್ಳಿಗೆ ಸಿಜಿಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ರಂಗಕರ್ಮಿ ತಾಯಣ್ಣ ಯರಗೇರಾ, ಸಾಹಿತಿಗಳಾದ ಅಯ್ಯಪ್ಪಯ್ಯ ಹುಡಾ, ಅಂಬಣ್ಣ ಅರೋಲಿ, ಈರಣ್ಣ ಬೆಂಗಾಲಿ, ಬಸವ ಬ್ರಿಗೇಡ್ ಸಂಚಾಲಕ ನರೇಶ ಡಿಂಗ್ರಿ ಉಪಸ್ಥಿತರಿದ್ದರು.