ಸಮುದಾಯವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ

IMG-20241213-WA0041
Published on

ರಾಯಚೂರು: ಮಾದರ ಚನ್ನಯ್ಯ ಜಯಂತಿ ಹೆಸರಿನಲ್ಲಿ ಬೇರೆ ಸಮುದಾಯದವರು ಜಯಂತಿಯ ನಾಯಕತ್ವ ವಹಿಸಿಕೊಳ್ಳುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಎಂಆರ್‌ಎಚ್‌ಎಸ್ ರಾಜ್ಯ ಗೌರವಾಧ್ಯಕ್ಷ ಎಸ್.ಮಾರೆಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಜಯಂತಿ ಹೆಸರಿನಲ್ಲಿ ಮಾದಿಗ ಸಮುದಾಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಎಂಎಲ್ಸಿ ಎ.ವಸಂತಕುಮಾರ ಮುಂದಾಗಿದ್ದಾರೆ. ಮಾದರ ಚನ್ನಯ್ಯ ಜಯಂತಿ ನಡೆಸಲು ವಿರೋಧವಿಲ್ಲ. ಆದರೆ ಜಯಂತಿ ಹೆಸರಿನಲ್ಲಿ ಮಾದಿಗ ಸಮುದಾಯ ರಾಜಕೀಯ ಅವಕಾಶಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿರುವುದು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಕಳೆದ ಜಿಲ್ಲಾ ಪಂಚಾಯತಿ ಚುನಾವಣೆ, ದೇವದುರ್ಗ ಮತ್ತು ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾದಿಗ ಸಮುದಾಯದವರಿಗೆ ಟಿಕೇಟ್ ನೀಡದೇ ಪರಿಶೀಷ್ಟ ಜಾತಿಯ ಇತರೆ ಸಮುದಾಯಗಳಿಗೆ ಟಿಕೇಟ್ ನೀಡಿ ವಂಚಿಸಲಾಯಿತು. ಇದೀಗ ಮಾದರ ಚನ್ನಯ್ಯ ಜಯಂತ್ಯೋತ್ಸವ ಆಚರಣೆ ಸಮಿತಿ ಗೌರವಾಧ್ಯಕ್ಷರನ್ನಾಗಿ ಎಂಎಲ್ಸಿ ಎ.ವಸಂತಕುಮಾರರನ್ನು ಆಯ್ಕೆ ಮಾಡಲಾಗಿರುವುದು ಖಂಡನೀಯ ಎಂದರು.

ಭವಿಷ್ಯದಲ್ಲಿ ರಾಯಚೂರು ವಿಧಾನಸಭಾ ಕ್ಷೇತ್ರ ಎಸ್ಸಿ ಮೀಸಲು ಆಗುವ ಸಾಧ್ಯತೆಗಳ ಹಿನ್ನಲೆಯಲ್ಲಿ ರಾಜಕೀಯವಾಗಿ ಮಾದಿಗ ಸಮುದಾಯವನ್ನು ಬಳಸಿಕೊಳ್ಳುವ ಹುನ್ನಾರ ನಡೆದಿದೆ. ಆದ್ದರಿಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಹೇಮರಾಜ ಅಸ್ಕಿಹಾಳ, ಆಂಜಿನೇಯ ಉಟ್ಕೂರು, ನರಸಿಂಹಲು ಮರ್ಚಟಾಳ, ತಾಯಪ್ಪ ಗದಾರ, ಶ್ರೀನಿವಾಸ ಕೊಪ್ಪರ, ನರಸಿಂಹಲು, ಅಬ್ರಾಹಂ ಕವಲಾಪುರು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net