

ರಾಯಚೂರು: ನಗರದ ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ರೈತರು ಮತ್ತು ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ತರಕಾರಿ ಮಾರಾಟಗಾರರು ಶನಿವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ನಾಜೀಯಾ ಬೇಗಂಗೆ ಮನವಿ ಸಲ್ಲಿಸಿ, ಕೋವಿಡ್ ಸಂದರ್ಭದಿಂದ ವೃತ್ತದಲ್ಲಿ ತರಕಾರಿ ಮಾರಾಟ ಮಾಡಿಕೊಂಡು ಉಪ ಜೀವನ ನಡೆಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ವ್ಯಾಪಾರಸ್ಥರನ್ನು ಮಾರುಕಟ್ಟೆಗೆ ಸ್ಥಳಾಂತರಿಸಬಾರದು ಎಂದು ಒತ್ತಾಯಿಸಿದರು.
ನಗರದ ಸುತ್ತಲಿನ ಗ್ರಾಮಗಳಾದ ಮಲಯಾಬಾದ್, ತುಂಟಾಪುರ, ಸಿದ್ರಾಂಪುರ, ರಾಜಲಬಂಡಾ, ಗೋನ್ವಾರ್, ದೇವನಪಲ್ಲಿ ಸೇರಿದಂತೆ ಹಲವು ಗ್ರಾಮಗಳ ರೈತರು ಬೆಳಗ್ಗೆ 4 ರಿಂದ ಸಂಜೆ 6ರವರೆಗೆ ವೃತ್ತದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಯಾರಿಗೂ ತೊಂದರೆಯಾಗಿಲ್ಲ. ವೃತ್ತದಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದರಿಂದ ಜಹೀರಾಬಾದ್, ಮಂಗಳವಾರಪೇಟೆ, ನೇತಾಜಿನಗರ, ತಿಮ್ಮಾಪುರ ಪೇಟೆ ನಿವಾಸಿಗಳಿಗೆ ಅನುಕೂಲವಾಗಿದೆ. ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಸ್ಥಳಾವಕಾಶವಿಲ್ಲದ ಕಾರಣ ವೃತ್ತದಲ್ಲಿಯೇ ತರಕಾರಿ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಯಿತು.