

ರಾಯಚೂರು: ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ದಾಳಿ ಮಾಡಿದಾಗ ಸುಮಾರು 90 ಸಾವಿರ ರೂ. ಮೌಲ್ಯದ ಅಕ್ರಮ ಕಳ್ಳಬಟ್ಟಿ ವಶಕ್ಕೆ ಪಡೆದು ಕ್ರಮ ವಹಿಸಲಾಗಿದೆ ಎಂದು ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ. ಕಳ್ಳಬಟ್ಟಿ ಅಕ್ರಮ ಸಾಗಣೆ ಮತ್ತು ಮಾರಾಟ ಬಗ್ಗೆ ಸಾರ್ವಜನಿಕರ ದೂರುಗಳು ಬಂದಿದ್ದವು. ಈ ಹಿನ್ನೆಲೆ ಮಾ.25ರಿಂದ ಈವರೆಗೆ ಜಿಲ್ಲೆಯ 50ಕ್ಕೂ ಹೆಚ್ಚು ತಾಂಡಾಗಳಲ್ಲಿ ದಾಳಿ ಮಾಡಲಾಗಿತ್ತು. ವಿಶೇಷ ಕಾರ್ಯಾಚರಣೆ ನಡೆಸಿದ ವಿವಿಧ ಠಾಣೆ ಪೊಲೀಸರ ತಂಡ ಈವರೆಗೆ ಒಟ್ಟು 111 ಪ್ರಕರಣಗಳು ದಾಖಲಿಸಿವೆ. 67 ಜನರ ಮೇಲೆ ವಿರುದ್ಧ ಕ್ರಮ ಜರುಗಿಸಲಾಗಿದೆ. ಒಟ್ಟು 90,895 ರೂ. ಮೌಲ್ಯದ ಕೈ ಹೆಂಡ ಜಪ್ತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಲು ಕೋರಿದ್ದಾರೆ.