ಲಾಕ್‌ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದ ಜನರಿಗೆ ಪೊಲೀಸರಿಂದ ದಂಡದ ಬಿಸಿ

Raichur Weekend Lockdown
ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ವಾರಾಂತ್ಯದ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಹೊರ ಬಂದ ವಾಹನ ಚಾಲಕರನ್ನು ವಿಚಾರಿಸುತ್ತಿರುವ ಪೊಲೀಸರು.
Published on

ರಾಯಚೂರು: ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಲಿಕೆ ಮಾಡಲಾಗಿದ್ದರೂ ವಾರಂತ್ಯ ಕರ್ಫೂ ಜಾರಿಯಲ್ಲಿದೆ. ಆದರೆ, ಶನಿವಾರ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿ ಕಂಡು ಬಂದವು. ಮತ್ತೊಂದೆಡೆ ನಿಯಮ ಉಲ್ಲಂಘಿಸಿ ವಹಿವಾಟು ನಡೆಸುತ್ತಿದ್ದ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು.

ಎರಡು ತಿಂಗಳಿನಿಂದ ಕರೊನಾ ಪ್ರಕರಣಗಳು ಹೆಚ್ಚಿದ ಕಾರಣಕ್ಕೆ ವಾರದಲ್ಲಿ ಎರಡು ದಿನ ಮಾತ್ರ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ನೀಡಲಾಗಿತ್ತು. ಪ್ರಕರಣಗಳ ಸಂಖ್ಯೆ ಇಳಿಮುಖವಾದ ಕಾರಣ ಒಂದು ವಾರದಿಂದ ನಿತ್ಯ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ವಾರಂತ್ಯದ ಎರಡು ದಿನ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿತ್ತು. ಆದರೆ, ಜನರು ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಬೆಳಗ್ಗೆಯಿಂದಲೇ ವಾಹನಗಳೊಂದಿಗೆ ರಸ್ತೆಗಿಳಿದಿದ್ದು, ಪ್ರಮುಖ ರಸ್ತೆಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ಅನಗತ್ಯವಾಗಿ ಹೊರಬಂದ ವಾಹನ ಸವಾರರಿಗೆ ದಂಡ ವಿಧಿಸಿ, ಓಡಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದರು.

ನಗರದ ಪಟೇಲ್ ರಸ್ತೆ, ಕಿರಾಣಿ ಬಜಾರ್ ಸೇರಿದಂತೆ ನಗರದ ಹಲವು ಬಡಾವಣೆಗಳಲ್ಲಿ ನಿಯಮ ಉಲ್ಲಂಘಿಸಿ ಕಿರಾಣಿ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿರುವುದು ಕಂಡು ಬಂದಿದ್ದು, ಪೊಲೀಸರು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ ಅಂಗಡಿಗಳನ್ನು ಮುಚ್ಚಿಸಿದರು.

ರಸ್ತೆ ಬದಿಯಲ್ಲಿ ತರಕಾರಿ, ಹಣ್ಣು ಮಾರಾಟವೂ ನಡೆದಿದ್ದು, ಬಹುತೇಕರಿಗೆ ವಾರಾಂತ್ಯದ ಲಾಕ್‌ಡೌನ್ ಬಗ್ಗೆ ಮಾಹಿತಿಯಿದ್ದಿಲ್ಲ. ಒಟ್ಟಾರೆಯಾಗಿ ವಾರಾಂತ್ಯದ ಲಾಕ್‌ಡೌನ್‌ಗೆ ಜನರಿಂದ ನಿರಸ ಪ್ರತಿಕ್ರಿಯೆ ದೊರೆತಿದ್ದು, ಕರೊನಾ ಹೋಗಿಬಿಟ್ಟಿದೆ ಎನ್ನುವ ರೀತಿಯಲ್ಲಿ ಜನರು ಓಡಾಟ ನಡೆಸಿದ್ದು, ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net