ವೀರಶೈವ ಜಂಗಮರಿಗೆ ಎಸ್ಸಿ ಪ್ರಮಾಣ ಪತ್ರ ನೀಡದಿರಿ

23082022 lng
Published on

ಲಿಂಗಸುಗೂರು: ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಕ್ರ.ಸಂ. 19 ರ ಬೇಡ, ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರ ಪಡೆಯಲು ಸತ್ಯಪ್ರತಿಪಾದನಾ ಹೋರಾಟ ನಡೆಸುತ್ತಿರುವ ವೀರಶೈವ ಜಂಗಮರಿಗೆ ಎಸ್ಸಿ ಪ್ರಮಾಣ ಪತ್ರ ನೀಡಬಾರದೆಂದು ಆಗ್ರಹಿಸಿ ಪರಿಶಿಷ್ಟ ಜಾತಿ ಮಿಸಲಾತಿ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿ ಎಸಿ ಕಚೇರಿ ತಹಸೀಲ್ದಾರ್ ಶಂಶಾಲಮ್‌ಗೆ ಮನವಿ ಸಲ್ಲಿಸಲಾಯಿತು. ಅಸ್ಪಶ್ಯತೆ, ಅಸಮಾನತೆ ನಿರ್ಮೂಲನೆಗೆ ಡಾ.ಬಿ.ಆರ್.ಅಂಬೇಡ್ಕರ ಸಂವಿಧಾನದಡಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಅವಕಾಶ ಕಲ್ಪಿಸಲು 1951 ರಲ್ಲಿ ಸಂವಿಧಾನದ ಅನುಚ್ಚೇದ 341, 342 ರಡಿ ಎಸ್‌ಸಿ, ಎಸ್‌ಟಿ ಮೀಸಲಾತಿ ನೀಡಿದ್ದು, ಕ್ರ.ಸಂ 19 ರಲ್ಲಿ ಬೇಡ ಜಂಗಮ, ಬುಡ್ಗ ಜಂಗಮ ಜಾತಿಗಳನ್ನು ಸೇರಿಸಲಾಗಿದೆ. ಆದರೆ, ಪೂಜ್ಯ ಭಾವನೆಯಿಂದ ಗೌರವಿಸಲ್ಪಡುವ ಜಂಗಮರು ಮೀಸಲಾತಿ ಹಕ್ಕನ್ನು ಕಸಿಯಲು ಹೋರಾಟ ನಡೆಸುತ್ತಿದ್ದಾರೆ ಎಂದು ದೂರಿದರು.

ಬೇಡ ಜಂಗಮರು ಮಾಂಸಹಾರಿಗಳಾಗಿದ್ದು, ವಾದ್ಯ ತಯಾರಿಕೆ, ವೇಷಧಾರಿ ವೃತ್ತಿಯಲ್ಲಿ ತೊಡಗಿದ್ದು ಅಲೆಮಾರಿಗಳಾಗಿದ್ದಾರೆ. ಲಿಂಗಾಯತ ಜಂಗಮರು ಪೂಜಾ ಕಾರ್ಯ ನಿರ್ವಹಿಸುತ್ತಾರೆ. ಹಾಗಾಗಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬಾರದೆಂದು ಒತ್ತಾಯಿಸಿದರು.

ಪ್ರಮುಖರಾದ ನಿಂಗಪ್ಪ ಪರಂಗಿ, ಹನುಮಂತಪ್ಪ ಕುಣಿಕೆಲ್ಲೂರು, ಭೀಮಣ್ಣ ಹಿರೇಮನಿ, ಲಾಲಪ್ಪ ರಾಠೋಡ್, ಬಸವರಾಜ, ದುರುಗಪ್ಪ ಭಜಂತ್ರಿ, ಉಮೇಶ ಮೋತಿ, ವೆಂಕಟೇಶ ಸಮಗಾರ, ಯಮನಪ್ಪ ದೇಗಲಮರಡಿ, ಹನಮಮಂತಪ್ಪ ಮದರಿ, ಕರಿಯಪ್ಪ ಸಿಂದೋಳಿ, ದುರುಗಪ್ಪ ದಾಸರ, ಸಣ್ಣಮಾರೆಪ್ಪ, ಶಿವರಾಜ ರುದ್ರಾಕ್ಷಿ, ಹಮಮಂತಪ್ಪ ವೆಂಕಟಾಪೂರ, ಕುಪ್ಪಣ್ಣ ಹೊಸಮನಿ, ದಾನಪ್ಪ ನಿಲೋಗಲ್, ರಾಮಲಿಂಗ, ಜಮದಗ್ನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net