ಚಿರತೆ ಪ್ರತ್ಯಕ್ಷದ ವಿಡಿಯೋ ವೈರಲ್: ಆತಂಕದಲ್ಲಿರುವ ಜನ: ಸ್ಥಳದಲ್ಲಿ ಬೀಡು ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ

raichur forest
Published on

ರಾಯಚೂರು: ಮಲಿಯಾಬಾದ್ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಭಾನುವಾರ ಇದೇ ಪ್ರದೇಶದಲ್ಲಿ ಆಕಳನ್ನು ಯಾವುದೋ ಪ್ರಾಣಿ ಕೊಂದು ತಿಂದಿರುವ ಬಗ್ಗೆ ಅರಣ್ಯ ಇಲಾಖೆಗೆ ದೂರು ಬಂದಿದ್ದು, ಪಶು ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ಮಂಗಳವಾರ ಇದೇ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಟುತ್ತಿರುವ ಬಗ್ಗೆ ಎಚ್ಚೆತ್ತ ಅರಣ್ಯ ಅಧಿಕಾರಿಗಳು ಮಲಿಯಾಬಾದ್ ಸುತ್ತಮುತ್ತಲೂ ಗಸ್ತು ತಿರುಗುತ್ತಿದ್ದಾರೆ. ಮತ್ತು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಅಲ್ಲದೇ ಮಲಿಯಾಬಾದ್ ಸುತ್ತಮುತ್ತಲಿನ ಸಂಶಯಾತ್ಮಕ ಪ್ರದೇಶಗಳಲ್ಲಿ ಬೋನ್‌ಗಳನ್ನು ಅಳವಡಿಸಲಾಗಿದೆ. ಚಿರತೆ ಸೆರೆಗೆ ಹಾಗೂ ಸ್ಥಳಾಂತರಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚಿರತೆ ಪತ್ತೆಯಾಗಿರುವ ವಿಡಿಯೋವನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಚಿರತೆ ಸೆರೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ಚಿರತೆ ಪತ್ತೆಗೆ ಗಸ್ತು ತಿರುಗಲಾಗುತ್ತಿದ್ದು. ಸಾರ್ವಜನಿಕರೂ ಕೂಡ ಚಿರತೆ ಕಂಡುಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಬಹುದು. | ರಾಜೇಶ್, ವಲಯ ಅರಣ್ಯಾಧಿಕಾರಿ, ರಾಯಚೂರು.

more

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net