ಕಾರ್ಮಿಕರಿಗೆ ಕಾನೂನು ಅರಿವು ಅತಿಮುಖ್ಯ: ನ್ಯಾಯಾಧೀಶ ಸಾತ್ವಿಕ್ ಹೇಳಿಕೆ

oplus_2
oplus_2
Published on

ರಾಯಚೂರು: ಜಗತ್ತು ವೇಗವಾಗಿ ಬೆಳೆಯುತ್ತಿದ್ದು, ಕಾರ್ಮಿಕರು ವಿವಿಧ ಸೌಲಭ್ಯವನ್ನು ಪಡೆದುಕೊಳ್ಳಲು ಕಾನೂನಿನ ನೆರವು ಅಗತ್ಯವಾಗಿದ್ದು, ಆಸಕ್ತರು ನ್ಯಾಯಾಲಯಕ್ಕೆ ಬಂದು ಉಚಿತ ಕಾನೂನು ಸಲಹೆ ಮತ್ತು ಇತರೆ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಎ ಸಾತ್ವಿಕ್ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕಾರ್ಮಿಕ ಕಾಯ್ದೆಗಳು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ಹಲವು ಕಾನೂನುಗಳಿದ್ದು, ಪ್ರತಿಯೊಬ್ಬರು ಕಾನೂನಿನ ಬಗ್ಗೆ ಅರಿತುಕೊಳ್ಳುವುದು ಅಗತ್ಯವಾಗಿದೆ. ನ್ಯಾಯಾಲಯಗಳಲ್ಲಿ ಕಾರ್ಮಿಕರಿಗೆ ಕಾನೂನಿನ ಮಹತ್ವ ಹಾಗೂ ಅದರ ಉಪಯೋಗಗಳನ್ನು ತಿಳಿಸಲಾಗುತ್ತದೆ. ಕಾರ್ಮಿಕರ ಏಳಿಗೆಗಾಗಿ ಅನೇಕ ಕಾಯ್ದೆಗಳು ಹಾಗೂ ಯೋಜನೆಗಳು ಜಾರಿಗೆ ಬಂದಿದ್ದು, ಅವುಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ ಮಾತನಾಡಿ, ಕಾರ್ಮಿಕರು ತಮಗಿರುವ ಸರಕಾರದ ಯೋಜನೆ ಹಾಗೂ ಕಾನೂನುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ವಿಶ್ವಕ್ಕೆ ಕಾರ್ಮಿಕರ ಕೊಡುಗೆ ಅಪಾರವಾದದ್ದು. ಕಾರ್ಮಿಕರ ಬದುಕು ಉಜ್ವಲಗೊಳ್ಳಲು ಸರಕಾರ ಕಾರ್ಮಿಕ ಇಲಾಖೆ ಮೂಲಕ ಹಲವಾರು ಯೋಜನೆಗಳನ್ನು ಹಲವಾರು ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರಿಗಾಗಿ ಜಾರಿಗೆ ತಂದಿದ್ದು, ಅವುಗಳಿಗಾಗಿ ಮೀಸಲಿರುವ ಅನುದಾನವನ್ನು ಪಡೆದುಕೊಂಡು ಜೀವನದಲ್ಲಿ ಉನ್ನತಿ ಸಾಧಿಸಬೇಕೆಂದರು.

ಈ ಸಂದರ್ಭದಲ್ಲಿ ಎಲ್.ಐ.ಸಿ ಶಾಖಾ ವ್ಯವಸ್ಥಾಪಕ ಮಧುಸೂದನ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ನಿರ್ದೇಶಕ ಮಂಜುನಾಥ ರೆಡ್ಡಿ, ಪ್ರಮುಖರಾದ ಎಸ್.ಮಹಾದೇವಪ್ಪ, ಜಾಫರ್ ಸಾಧಿಕ್, ಫಿರೋಜ್ ಖಾನ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net