ಪರಿಹಾರದ ಹಣ ಬೇರೆಯವರ ಖಾತೆಗೆ ವರ್ಗ: ಪ್ರಕರಣ ದಾಖಲು

Published on

ರಾಯಚೂರು: ರಾಯಚೂರು-ಬಾಗಲಕೋಟೆ ಹೆದ್ದಾರಿ ಅಗಲೀಕರಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ ಭೂಮಿಯ ಭೂ ಪರಿಹಾರ ಹಣವನ್ನು ಭೂಸ್ವಾಧೀನಾಧಿಕಾರಿಗಳು ಭೂಮಾಲಿಕರಿಗೆ ನೀಡದೇ ಮತ್ತೊಬ್ಬರ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಪೋತಾಪುರ ಗ್ರಾಮದಲ್ಲಿ ಅ.23ರಂದು ಕೇಳಿಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪೋತಪುರ ಗ್ರಾಮದ ಸರ್ವೆ ನಂ.35/1 ಎ, 35/1ಬಿ, 35/ಸಿ ಹಾಗೂ 35/2ರಲ್ಲಿರುವ 1108.28 ಚ.ಮೀ ಭೂಮಿಯನ್ನು ಬೆಳಗಾವಿ, ಹುನುಗುಂದಾ, ರಾಯಚೂರು ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರಲ್ಲಿ 250 ಚ.ಮೀ ವಿಸ್ತೀರ್ಣದ ಜಾಗವು ನನಗೆ ಸೇರಿದ್ದು, ಈ ಭೂಮಿಯ ಪರಿಹಾರದ ಹಣವನ್ನು ಬೇರೆಯವರ ಖಾತೆಗೆ ಭೂಸ್ವಾಧೀನಾಧಿಕಾರಿಗಳು ಜಮಾ ಮಾಡಿದ್ದಾರೆ ಎಂದು ಅದೇ ಗ್ರಾಮದ ಮಹಿಳೆ ಶ್ರೀದೇವಿ ರಾಯಚೂರು ನಗರದ ನೇತಾಜಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಅದೇ ಗ್ರಾಮದ ಪಿ.ಸಿದ್ಧನಗೌಡ, ರುದ್ರಗೌಡ, ಶಂಕರಗೌಡ, ಅಮರೇಶ, ವಿನಯ ಎಂಬುವವರ ಜಂಟಿ ಖಾತೆಗೆ ನನಗೆ ಸೇರಬೇಕಾಗಿದ್ದ 43,47,310ರೂ.ಗಳ ಭೂ ಪರಿಹಾರದ ಹಣವನ್ನು ಅ.10ರಂದು ಜಮಾ ಮಾಡಲಾಗಿದೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾಳೆ. ಪ್ರಕರಣವನ್ನು ದಾಖಲಿಸಿಕೊಂಡ ನೇತಾಜಿ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net