

ರಾಯಚೂರು: ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಯಿಂದ ನೀಡಿರುವ ಸುರಕ್ಷತಾ ಸಾಧನಗಳನ್ನು ಅಳವಡಿಸಿಕೊಂಡು ಕಟ್ಟಡ ನಿರ್ಮಾಣದ ಕಾರ್ಯಗಳನ್ನು ನಿರ್ವಹಿಸಿದಲ್ಲಿ ಯಾವುದೇ ಅಪಘಾತ ಸಂಭವಿಸುವುದಿಲ್ಲ ಎಂದು ಶಿವಾನಂದ ಭಜಂತ್ರಿ ಹೇಳಿದರು.
ನಗರದ ನಿರ್ಮಿತಿ ಕೇಂದ್ರದ ಕಚೇರಿಯಲ್ಲಿ ಜಿಲ್ಲಾಡಳಿತ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ, ನಿರ್ಮಿತಿ ಕೇಂದ್ರ, ಜಿಲ್ಲಾ ಬಾಲಕಾರ್ಮಿಕ ಯೋಜನೆ ಹಾಗೂ ಕ್ಯಾಡ್‌ಮ್ಯಾಕ್ಸ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರಿಗೆ ಆರ್.ಪಿ.ಎಲ್ ತರಬೇತಿ ಮತ್ತು ಸೇಫ್ಟಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
ಕಟ್ಟಡ ಕಾರ್ಮಿಕರು ಸುರಕ್ಷತೆಯಿಂದ ಕೆಲಸ ಮಾಡಬೇಕು. ಕುಟುಂಬದ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಸಾಧನಗಳನ್ನು ಬಳಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಸುರಕ್ಷತಾ ಸಾಧನೆಗಳ ಬಳಕೆಯ ಬಗ್ಗೆ ತರಬೇತಿಯಿಂದ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿ ಆರತಿ, ಕ್ಯಾಡ್‌ಮ್ಯಾಕ್ಸ್ ಸಂಸ್ಥೆಯ ಮುಖ್ಯಸ್ಥ ಮಲ್ಲಿಕಾರ್ಜುನ, ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜುನಾಥ ರೆಡ್ಡಿ, ನಿರ್ಮಿತಿ ಕೇಂದ್ರದ ವಿಶೇಷಾಧಿಕಾರಿ ಗಣಪತಿ ಸಾಕ್ರೆ, ಕಾರ್ಮಿಕ ನಿರೀಕ್ಷಕ ಮಹ್ಮದ ಉಮರ್ ಅಬ್ದುಲ್ ಗನಿ, ಸೇರಿದಂತೆ ಇತರರಿದ್ದರು.