ಕಾರ್ಮಿಕ‌‌ ಸಂಹಿತೆಗಳನ್ನು ವಾಪಸ್ ಪಡೆಯುವಂತೆ ಕೇಂದ್ರದ ವಿರುದ್ಧ ಜೆಸಿಟಿಯು ಪ್ರತಿಭಟನೆ

JCTU
Published on

ರಾಯಚೂರು: ಕೇಂದ್ರ ಬಿಜೆಪಿ ಸರ್ಕಾರ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಕೈಬಿಡುವಂತೆ ಕಾರ್ಮಿಕ ಸಂಘಗಳ ಜಂಟಿ ಸಮಿತಿ(ಜೆಸಿಟಿಯು) ಜಿಲ್ಲಾ ಘಟಕದಿಂದ ನಗರದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕಾರ್ಮಿಕರಿಗೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿ, ಜನರ ಹಾಗೂ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ. ವಿರೋಧಪಕ್ಷದ ಸದಸ್ಯರು ಶಾಸನ ಸಭೆಯಲ್ಲಿ ಹಾಜರಿಲ್ಲದೇ ಸಂಹಿತೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ತರಾತುರಿಯಲ್ಲಿ ಅನುಮೋದಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂಹಿತೆಗಳ ಜಾರಿಯಿಂದಾಗಿ ಕಾರ್ಮಿಕರ ಎಲ್ಲ ಹಕ್ಕುಗಳು ಮೊಟುಕುಗೊಂಡಿದ್ದು, ಕಾರ್ಮಿಕರನ್ನು ರಕ್ಷಣೆ ಮಾಡುತ್ತಿದ್ದ ಕಾಯ್ದೆಗಳನ್ನು ಈ ಸಂಹಿತೆಗಳು ದುರ್ಬಲಗೊಳಿಸುತ್ತಿವೆ. ಕೈಗಾರಿಕಾ ವಲಯಗಳಲ್ಲಿ ಸಂಹಿತೆಗಳ ಜಾರಿಯಿಂದ ಸಂಘರ್ಷಗಳು ಏರ್ಪಡುತ್ತಿವೆ. ಕೈಗಾರಿಕೆಗಳ ಮಾಲಿಕರು ಕಾರ್ಮಿಕರ ಬೇಡಿಕೆಗಳನ್ನು ಹಾಗೂ ಮುಷ್ಕರಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ.

ಆದ್ದರಿಂದ ಕೂಡಲೇ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಎಚ್.ಪದ್ಮಾ, ಕೆ.ಜಿ ವೀರೇಶ, ಆನಂದ, ತಿಮ್ಮಪ್ಪ ಸ್ವಾಮಿ, ಡಿ.ಎಸ್ ಶರಣಬಸವ, ಮಹೇಶ ಚೀಕಲಪರ್ವಿ, ಎನ್.ಎಸ್ ವೀರೇಶ, ಎಸ್.ಂ ಪೀರಾ, ಶರಣಗೌಡ, ರವಿ, ಸಲಾವುದ್ದಿನ್, ಶ್ರೀನಿವಾಸ, ಕುಮಾರ ಉಕ್ಕಲಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net