

ರಾಯಚೂರು: ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿ. (ಕೆಐಒಸಿಎಲ್) ಕಂಪನಿ ಗಣಿಗಾರಿಕೆಗೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ ಕುಮಾರಸ್ವಾಮಿ ತರಾತುರಿಯಲ್ಲಿ ಅನುಮೋದನೆ ನೀಡಿ ಜವಾಬ್ದಾರಿ ಮರೆತಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಈ ಹಿಂದೆ ಪಶ್ಚಿಮ ಘಟ್ಟದಲ್ಲಿ ಕೆಐಒಸಿಎಲ್ ಎರಡು ದಶಕ ನಡೆಸಿದ ವಿನಾಶಾತ್ಮಕ ಹಾಗೂ ವಿವಾದಾತ್ಮಕ ಗಣಿಗಾರಿಕೆ ಗುತ್ತಿಗೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಭದ್ರಾವತಿ ವಿಐಎಸ್‌ಎಲ್ ಕಂಪನಿಗೆ ಸಂಡೂರು ಅರಣ್ಯ ಪ್ರದೇಶದಲ್ಲಿ ಗಣಿ ಗುತ್ತಿಗೆಯನ್ನು ರದ್ದುಪಡಿಸುವಂತೆ ಒತ್ತಾಯಿಸಲಾಗಿತ್ತು. ಕೆಐಒಸಿಎಲ್ ಕಂಪನಿಗೆ ಒಂದು ಸಾವಿರ ಎಕರೆ ಗಣಿ ಗುತ್ತಿ ನೀಡಿದಲ್ಲಿ 99,330 ಮರಗಳ ಮಾರಣಹೋಮ ವಾಗುತ್ತದೆ. ವಿಐಎಸ್‌ಎಲ್ ಕಂಪನಿಗೆ ಸಂಡೂರಿನ ಅರಣ್ಯದಲ್ಲಿ 150 ಎಕರೆ ಗಣಿ ಗುತ್ತಿಗೆ ನೀಡಿದ್ದಲ್ಲಿ 29,440 ಮರಗಳು ನಾಶವಾಗುತ್ತವೆ ಎಂದರು.
ಪರಿಸರಕ್ಕೆ ಹಾನಿಯಾಗುವ ಪ್ರಸ್ತಾವನೆಗಳಿಗೆ ಸಚಿವರಾದ ಹೊಸದರಲ್ಲೇ ಅನುಮೋದನೆ ನೀಡಿ ದೇಶದ ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಸೌಂದರ್ಯ ಹಾಳು ಮಾಡಲು ಮುಂದಾಗಿದ್ದಾರೆ. ಪರಿಸರಕ್ಕೆ ಹಾನಿ ಆಗುವುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವರದಿ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಎಸ್.ಆರ್.ಹಿರೇಮಠ ದೂರಿದರು. ಪ್ರಮುಖರಾದ ಖಾಜಾ ಅಸ್ಲಾಮ್, ಜಾನ್ ವೆಸ್ಲೇ, ಭೀಮರಾಯ್ ಇದ್ದರು.