

ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಆರ್‌ಟಿಪಿಎಸ್)ದಿಂದ ಹಾರು ಬೂದಿ ಹೊಂಡದ ನೀರು ಕೃಷ್ಣಾನದಿಗೆ ಸೇರುತ್ತಿದ್ದು, ನದಿ ನೀರು ಕಲುಷಿತಗೊಳ್ಳುತ್ತಿದೆ.
ವಿದ್ಯುತ್ ಕೇಂದ್ರದಿಂದ ಅಪಾರ ಪ್ರಮಾಣದ ಬೂದಿ ಮಿಶ್ರಿತ ನೀರು ನದಿ ನೀರಿಗೆ ಸೇರಿಕೊಳ್ಳುತ್ತಿರುವುದರಿಂದ ನದಿ ಪಾತ್ರದ ಜನರು ಆತಂಕದಲ್ಲಿದ್ದಾರೆ. ದೇವಸುಗೂರು ಸೇರಿದಂತೆ ಇತರೆ ಗ್ರಾಮಗಳ ಜನರು ಇದೇ ನೀರನ್ನು ಬಳಸುತ್ತಾರೆ.
ಹಾರು ಬೂದಿಯಿಂದ ಸ್ಥಳೀಯರಿಗೆ ಆರೋಗ್ಯಕ್ಕೆ ತೊಂದರೆ, ಆರ್‌ಟಿಪಿಎಸ್ ಹಾರು ಬೂದಿಯನ್ನು ಸಾಗಿಸುವ ಲಾರಿಗಳಿಂದ ಪ್ರಯಾಣಿಕರಿಗೆ ತೊಂದರೆ, ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಸರಿಯಾದ ವೇತನ ಸಿಗದೇ ತೊಂದರೆ ಹೀಗೆ ಹಲವು ಸಮಸ್ಯೆಗಳು ಆರ್‌ಟಿಪಿಎಸ್ ಕೇಂದ್ರದ ವಿರುದ್ಧ ಕೇಳಿ ಬರುತ್ತಿದ್ದು, ಉತ್ತರಿಸಬೇಕಾದ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ.
ನದಿಗೆ ಕಲುಷಿತ ನೀರು ಸೇರುತ್ತಿರುವ ಬಗ್ಗೆ ವಿಚಾರಿಸಲು ಆರ್‌ಟಿಪಿಎಸ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸರಿಯಾದ ಸ್ಪಂಧನೆ ಸಿಗುತ್ತಿಲ್ಲ. ಕೂಡಲೇ ವಿದ್ಯುತ್ ಕೇಂದ್ರದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕಿದೆ.