

ರಾಯಚೂರು: ಕೋಲ್ಕತ್ತಾ ವೈದ್ಯೆ ಮೇಲಿನ ಅತ್ಯಾಚಾರವನ್ನು ಖಂಡಿಸಿ ವಿವಿಧ ಸಂಘ ಸಂಸ್ಥೆಗಳಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪೂರ್ಣಿಮಾ ಆಯುರ್ವೇದ ಆಸ್ಪತ್ರೆ ಹಾಗೂ ಮಹಾವಿದ್ಯಾಲಯ, ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್, ಬಿಜೆಪಿ ಮಹಿಳಾ ಮೋರ್ಚಾ, ತಾಲೂಕು ಕಮ್ಮವಾರಿ ಸಂಘ, ಅಖಿಲ ಭಾರತೀಯ ಗ್ರಾಹಕರ ಪಂಚಾಯತ್, ಬಸವ ಕೇಂದ್ರ, ಎಫ್‌ಪಿಎ, ರಿಮ್ಸ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
ಕೋಲ್ಕತ್ತಾ ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆದಿರುವುದು ಅತ್ಯಂತ ಖಂಡನೀಯ ಸಂಗತಿಯಾಗಿದ್ದು, ದುಷ್ಕೃತ್ಯವೆಸಗಿದವರ ಮೇಲೆ ಕೂಡಲೇ ನ್ಯಾಯಾಲಯ ಅತ್ಯಂತ ಕಠಿಣ ಶಿಕ್ಷೆ ನೀಡಿ, ಮರಣಹೊಂದಿದೆ ವೈದ್ಯೆಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಂತರ ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿ ಮಹ್ಮದ್ ಆಸೀಫ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ರೇಖಾ ಕೇಶವರೆಡ್ಡಿ, ಲಲಿತಾ ಸತ್ಯಕುಮಾರ್, ಅನಿತಾ ವೆಂಕಟೇಶ್, ಲಲಿತಾ ಕಡಗೋಲ, ಶರಣಮ್ಮ ಕಾಮರೆಡ್ಡಿ, ಆರ್ ವೆಂಕಟಸ್ವಾಮಿ, ಸುನಂದಾ ನಂದಕೂರ್, ರಾಜೇಂದ್ರ ಶಿವಾಳೆ, ರಾಮಚಂದ್ರ ಕಡಗೋಲ್, ದುರ್ಗಾ, ಕವಿತಾ ಕಾಂಬ್ಳೆ, ಶ್ರೀದೇವಿ, ಸೌಮ್ಯಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.