

ರಾಯಚೂರು: ದೇಶದ ಸ್ವಾತಂತ್ರೃಕ್ಕಾಗಿ ಬ್ರಿಟೀಷರ ವಿರುದ್ಧ ದಿಟ್ಟತನದಿಂದ ಹೋರಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ದೈರ್ಯ ಸಾಹಸವನ್ನು ಮೆಚ್ಚುವಂತದ್ದು. ಇಂತಹ ಧೀರ ಮಹಿಳೆಯ ಸಾಹಸಗಳು ಕೇವಲ ಜಯಂತಿ ಆಚರಣೆ ವೇಳೆ ಮಾತ್ರ ನೆನಪಿಸಿಕೊಳ್ಳದೇ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.
ದತ್ತುಪುತ್ರರಿಗೆ ಹಕ್ಕಿಲ್ಲ ಎಂಬ ನೀತಿ ವಿರುದ್ಧ ತನ್ನ ಪತಿ ಮತ್ತು ಮಗನನ್ನು ಕಳೆದುಕೊಂಡ ರಾಣಿ ಚನ್ನಮ್ಮ, ನಂತರ ಕಿತ್ತೂರು ಸಂಸ್ಥಾನವನ್ನು 1824 ರಲ್ಲಿ ಬ್ರಿಟಿಷರು ವಶಪಡಿಸಿಕೊಳ್ಳುವ ಪ್ರಯತ್ನ ವೇಳೆ ಬ್ರಿಟಿಷರ ವಿರುದ್ಧ ಹೋರಾಡಿ ಸಂಸ್ಥಾನ ಉಳಿಸಿಕೊಂಡಳು ಎಂದರು.
ರಾನಿ ಚನ್ನಮ್ಮ ಬಾಲ್ಯದಲ್ಲಿ ಬಿಲ್ವಿದ್ಯೆ, ಕತ್ತಿ ವರಸೆ, ಕುದುರೆ ಸವಾರಿ ಸೇರಿ ಹಲವು ವಿದ್ಯೆಗಳನ್ನು ಕಲಿತುಕೊಂಡಿದ್ದರು. ದೇಶದ ಸ್ವಾತಂತ್ರಕ್ಕಾಗಿ ಕಿತ್ತೂರು ರಾಣಿ ಚನ್ನಮ್ಮ ತನ್ನದೇ ಆದ ಕೊಡುಗೆ ನೀಡಿದ್ದಾರೆ. ರಾಣಿ ಚನ್ನಮ್ಮರಂತೆ ಈಗಿನ ಮಹಿಳೆಯರು ಧೈರ್ಯ ಸಾಹಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಂಗಮಂದಿರದ ವರೆಗೂ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಎಸ್ಪಿ ಜಿ.ಹರೀಶ, ತಹಸೀಲ್ದಾರ್ ಸುರೇಶ ವರ್ಮಾ, ಡಿಡಿಪಿಯು ಜಯರಾಮ, ಪ್ರಮುಖರಾದ ಬಾಬುರಾವ ಶೇಗುಣಸಿ, ದಾನಮ್ಮ, ಈರಮ್ಮ, ದಂಡಪ್ಪ ಬಿರಾದಾರ ಸೇರಿದಂತೆ ಇತರರಿದ್ದರು.