ಸಾರ್ಥಕ ಕಾಣಲಿದೆ ಪ್ರತಿಫಲಾಪೇಕ್ಷೆಯಿಲ್ಲದ ಸೇವೆ

SWAMIJI
ರಾಯಚೂರಿನಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಉದ್ಘಾಟಿಸಿದರು. ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಮುಖ್ಯಸ್ಥೆ ಸ್ಮೀತಾ ಅಕ್ಕ, ನಗರಸಭೆ ಪ್ರಭಾರ ಪೌರಾಯುಕ್ತ ಮಹೆಬೂಬ್ ಜಿಲಾನಿ, ಸಾಹಿತಿ ವೀರಹನುಮಾನ, ಉಪನ್ಯಾಸಕ ರಮೇಶ ಬಲ್ಲಿದ್, ಸಂಸ್ಥೆ ಅಧ್ಯಕ್ಷ ವಿಶ್ವನಾಥ ರೆಡ್ಡಿ ಇದ್ದರು.
Published on

ರಾಯಚೂರು: ಪ್ರಸ್ತುತ ದಿನಮಾನದಲ್ಲಿ ಸಮಾಜ ಸೇವೆ ಹೆಸರಿನಲ್ಲಿ ಸ್ವಂತ ಲಾಭಕ್ಕಾಗಿ ಕೆಲಸ ಮಾಡುವವರು ಹೆಚ್ಚಾಗಿದ್ದು, ಪ್ರತಿಫಲಾಕ್ಷೆಯಿಲ್ಲದೆ ಸೇವೆ ಮಾಡುವವರ ಸಂಖ್ಯೆ ವಿರಳವಾಗಿದೆ ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ವೀರಶೈವ ಕಲ್ಯಾಣ ಮಂಟಪದಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಕಲಾಂ ಹೆಸರಿನಲ್ಲಿ ತಂಡ ಕಟ್ಟಿಕೊಂಡು ನಿಸ್ವಾರ್ಥ ಸೇವೆ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಜೀವನ ಸಾಕಾರಗೊಳ್ಳಲು ಸಮಾಜಕ್ಕಾಗಿ ಕೆಲಸ ಮಾಡಬೇಕು. ಫಲಾಪೇಕ್ಷೆಯಿಲ್ಲದೆ ತನು, ಮನ, ಧನದಿಂದ ಕೆಲಸ ಮಾಡಿದಾಗ ಸೇವೆಗೆ ಅರ್ಥ ಬರಲಿದೆ. ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ, ನಿಸ್ವಾರ್ಥ ಸೇವೆಯಿಂದಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಕಿಲ್ಲೆ ಬೃಹನ್ಮಠದ ಸ್ವಾಮೀಜಿ ಹೇಳಿದರು.

ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಮುಖ್ಯಸ್ಥೆ ಸ್ಮೀತಾ ಅಕ್ಕ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಜನರು ಎಲೆಮರೆ ಕಾಯಿಯಂತೆ ಅತ್ಯುತ್ತಮ ಕೆಲಸ ಮಾಡುತ್ತಿದ್ದು, ಅಂಥವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದವರನ್ನು ಗೌರವಿಸಲಾಯಿತು. ನಗರಸಭೆ ಪ್ರಭಾರ ಪೌರಾಯುಕ್ತ ಮಹೆಬೂಬ್ ಜಿಲಾನಿ, ಸಾಹಿತಿ ವೀರಹನುಮಾನ, ಉಪನ್ಯಾಸಕ ರಮೇಶ ಬಲ್ಲಿದ್, ಸಂಸ್ಥೆ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಪದಾಧಿಕಾರಿಗಳಾದ ಪ್ರಾಣೇಶ, ನರಸಪ್ಪ, ದುಳ್ಳಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net