

ರಾಯಚೂರು: ಕರೊನಾ ಸಂದರ್ಭದಲ್ಲಿ ಮನೆಯಲ್ಲೇ ಇರುವ ಸಾಹಿತಿಗಳಿಗೆ ತಮ್ಮ ಕವನಗಳ ಪ್ರಸ್ತುತ ಪಡಿಸಲು ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವಿನೂತನ ಪ್ರಯತ್ನಕ್ಕೆ ಮುಂದಾಗಿ ಯಶಸ್ವಿ ಕಂಡಿದೆ.
ಭಾನುವಾರ ಸಂಜೆ ತಾಲೂಕಿನ ಕಸಾಪ ಪದಾಧಿಕಾರಿಗಳು ಆನ್‌ಲೈನ್‌ನಲ್ಲಿ ಝೂಮ್ ಆ್ಯಪ್ ಬಳಸಿಕೊಂಡು ಹಲವು ಕವಿಗಳನ್ನು ಬೆಸೆದಿದ್ದಾರೆ. ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಶಿಖರ ಮಠ, ಗೌರವ ಕಾರ್ಯದರ್ಶಿ ವಿಜಯರಾಜೇಂದ್ರ, ಮಹಿಳಾ ಪ್ರತಿನಿಧಿ ಡಾ.ಅರುಣಾ ಹಿರೇಮಠ ಅವರು ಹಲವು ಕವಿಗಳನ್ನು ಒಂದೆ ವೇದಿಕೆಯಡಿ ತಂದು ಸಂವಹನಕ್ಕೆ ಅವಕಾಶ ಕಲ್ಪಿಸಿದರು. ಆನ್‌ಲೈನ್ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಯುವ ತಂಡದ ಹೊಸ ಪ್ರಯತ್ನವನ್ನು ಶ್ಲಾಘಿಸಿದರು.
ಕರೊನಾ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವ ಜತೆಗೆ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಹಲವು ಸಾಹಿತಿಗಳಿಗೆ ಕವನ ವಾಚನಕ್ಕೆ ವೇದಿಕೆ ಒದಗಿಸಿದ್ದು ಇತರರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು. ನಂತರ 24 ಕವಿಗಳು ಪಾಲ್ಗೊಂಡು ಆನ್‌ಲೈನ್‌ನಲ್ಲೇ ಕವನ ವಾಚನ ಮಾಡಿದರು. ಹತ್ತಕ್ಕೂ ಅಧಿಕ ಸಾಹಿತ್ಯಾಸಕ್ತರು, ಕಸಾಪ ಪದಾಧಿಕಾರಿಗಳು ಆನ್‌ಲೈನ್‌ನಲ್ಲಿನ ಕವಿಗಳ ಕವನಗಳನ್ನು ಆಲಿಸಿದರು. ಒಟ್ಟಾರೆ ತಾಲೂಕು ಕಸಾಪ ಪದಾಧಿಕಾರಿಗಳ ತಂಡದ ವಿನೂತನ ಪ್ರಯತ್ನಕ್ಕೆ ಕವಿಗಳೂ ಮನಸೋತು ಪ್ರಶಂಸಿಸಿದರು.