ಬೆಟ್ಟಿಂಗ್ ಅಪ್ಲಿಕೇಷನ್‌ಗಳಿಂದ ಜನರಿಗೆ ಆರ್ಥಿಕ ನಷ್ಟ

IMG-20241214-WA0021
Published on

ರಾಯಚೂರು: ಆನ್ಲೈನ್ ಸಾಲ ಮತ್ತು ಗೇಮಿಂಗ್ ಅಪ್ಲಿಕೇಷನ್‌ಗಳಿಗೆ ಕಡಿವಾಣ ಹಾಕುವಂತೆ ಡಿ.16ರಂದು ನಮ್ಮ ಕರ್ನಾಟಕ ಸೇನೆಯಿಂದ ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಸಂಚಾಲಕ ಎಂ.ಎಸ್.ವೆಂಕಟೇಶ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಆನ್ಲೈನ್ ಬೆಟ್ಟಂಗ್ ಗೇಮ್‌ಗಳಿಂದ ಸಮಾಜದಲ್ಲಿ ಯುವಕರು, ದುಡಿಯುವ ವರ್ಗದ ಜನಾಂಗ ಸೇರಿದಂತೆ ಎಲ್ಲ ಸಮೂಹದ ಜನರು ಆರ್ಥಿಕ ನಷ್ಟವನ್ನು ಅನುಭವಿಸಿ, ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ಅಪರಾಧಕ್ಕೆ ತುತ್ತಾಗುತ್ತಾರೆ. ಗೇಮ್‌ಗಳ ಜತೆಗೆ ಸಾಲ ನೀಡುವ ಹಲವು ಅಪ್ಲಿಕೇಷನ್‌ಗಳಿಂದ ಸಾಲ ಪಡೆದ ಜನರಿಗೆ ವಸೂಲಿ ಕಿರುಕುಳ ಹೆಚ್ಚಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಇಂತಹ ಗೇಮಿಂಗ್ ಹಾಗೂ ಬೆಟ್ಟಿಂಗ್ ಅಪ್ಲಿಕೇಷನ್‌ಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕೊಂಡಪ್ಪ, ಮಹೇಶ ಪಾಟೀಲ್, ಮಾಣಿಕ ಇಂಗಳೆ, ತಿಕ್ಕಣ್ಣ ನಾಗರಾಜ, ವೆಂಕಟೇಶ, ರಾಮಕೃಷ್ಣ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net