ಕಾಂತರಾಜು ಆಯೋಗದ ವರದಿ ಜಾರಿಯಾಗಲಿ: ಕೆ.ಶಾಂತಪ್ಪ

IMG-20241217-WA0017
Published on

ರಾಯಚೂರು: ರಾಜ್ಯದಲ್ಲಿ ಜನಸಂಖ್ಯೆಗನುಗುಣವಾಗಿ ಅನುದಾನ ಹಂಚಿಕೆಯಾಗಬೇಕು. ಹಿಂದುಳಿದ ಜಾತಿಗಳಿಗೆ ಸೇರಿದ ನಿಗಮಗಳಿಗೆ ನೀಡುವ ಅನುದಾನವನ್ನು ಹೆಚ್ಚಳ ಮಾಡಬೇಕೆಂದು ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, 2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಕಾಂತರಾಜು ಆಯೋಗದ ವರದಿ ಸ್ವೀಕರಿಸಿ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದು, ಆದರೆ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಭರವಸೆ ಈಡೇರಿಸಿಲ್ಲ. ಕೂಡಲೇ ಕಾಂತರಾಜು ಆಯೋಗದ ವರದಿ ಜಾರಿಗೊಳಿಸುವಂತೆ ಹಾಗೂ ಹಿಂದುಳಿದ ಜಾತಿಗಳ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಡಿ18ರಂದು ಬೆಳಗಾವಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಹಿಂದುಳಿದ ಜಾತಿಗಳಿಗೆ ಸಮುದಾಯ ಭವನ, ವಿದ್ಯಾರ್ಥಿ ನಿಲಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಅನುದಾನವನ್ನು ನೀಡಲಾಗುತ್ತಿತ್ತು . ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳು ಪೂರೈಸಿದ್ದರೂ ಯಾವುದೇ ಅನುದಾನ ನೀಡುತ್ತಿಲ್ಲ. ಜತೆಗೆ ಕಾಂತರಾಜು ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರುತ್ತಿಲ್ಲ. ಇದರಿಂದ ಹಿಂದುಳಿದ ಜಾತಿಗಳ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಹನುಮಂತಪ್ಪ, ಪ್ರಮುಖರಾದ ಜಂಬಣ್ಣ, ಜಿ.ಸುರೇಶ, ಉದಯ, ಈರಪ್ಪಗೌಡ, ಆಂಜನೇಯ್ಯ, ಸುರೇಖಾ, ವಿಜಯಭಾಸ್ಕರ ಇಟಗಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net