

ರಾಯಚೂರು: ಕಾಂತರಾಜು ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ವೀರಶೈವ ಕಲ್ಯಾಣ ಮಂಟಪದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಕಚೇರಿ ಆವರಣದಲ್ಲಿ ಎಡಿಸಿ ಶಿವಾನಂದ ಭಜಂತ್ರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.
ಕಳೆದ ಹತ್ತು ವರ್ಷಗಳ ಹಿಂದೆ ನಡೆಸಲಾದ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯು ಹಲವು ಲೋಪಗಳಿಂದ ಕೂಡಿದ್ದು, ಸರಿಪಡಿಸುವ ಅಗತ್ಯವಿದೆ. ಹೀಗಾಗಿ ಹೊಸದಾಗಿ ವೈಜ್ಞಾನಿಕ ಸಮೀಕ್ಷೆಯನ್ನು ಸಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆದ ಸಮೀಕ್ಷೆಯ ವರದಿಗಳೇ ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸುಗಳಾಗಿದ್ದು, ಈ ಶಿಫಾರಸ್ಸುಗಳನ್ನೇ ರಾಜ್ಯ ಸರ್ಕಾರ ಪರಿಗಣಿಸುತ್ತಿದೆ. ಸಮೀಕ್ಷೆಯ ವರದಿಗಳು ಅವೈಜ್ಞಾನಿಕ ಹಾಗೂ ಅಸಂವಿಧಾನಿಕವಾಗಿದ್ದು, ಸ್ವೀಕಾರಕ್ಕೆ ಅನರ್ಹವಾಗಿರುತ್ತವೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕಾಂತರಾಜು ಆಯೋಗದ ವರದಿಯನ್ನು ಪರಿಗಣಿಸಬಾರದೆಂದು ಆಗ್ರಹಿಸಲಾಯಿತು.
ರಾಜ್ಯ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದ ಉಪಜಾತಿಗಳ ಜತೆಗೆ ಲಿಂಗಾಯತ ಎಂಬ ಪದವನ್ನು ಸೇರಿಸದೇ ಕೇವಲ ಉಪಜಾತಿಗಳ ಹೆಸರನ್ನು ನಮೂದಿಸಲಾಗಿರುತ್ತದೆ. ಕೂಡಲೇ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಪಟ್ಟಿಯಲ್ಲಿರುವ ಲಿಂಗಾಯತ ಉಪಜಾತಿಗಳ ಹೆಸರುಗಳಿಗೆ ಲಿಂಗಾಯತ ಪದ ಸೇರಿಸಿ ತಿದ್ದುಪಡಿಗೊಳಿಸಬೇಕು. ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳನ್ನು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಲಾಯಿತು.
ಇದಕ್ಕೂ ಮೊದಲು ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಸಂಘದ ಪಾದಾಧಿಕಾರಿಗಳು, ಸಮಾಜದ ಪ್ರಮುಖರ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ನೀಲಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೆಮಠದ ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿ, ಮಂಗಳವಾರಪೇಟೆ ಹಿರೆಮಠದ ವೀರಸಂಗಮೇಶ್ವರ ಸ್ವಾಮೀಜಿ, ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಶರಣಬೂಪಾಲ ನಾಡಗೌಡ, ಪರಮೇಶ್ವರ ಸಾಲಿಮಠ, ಶಿವಶರಣರೆಡ್ಡಿ, ಸಿ.ಎಸ್.ಪಾಟೀಲ್, ಶರಣಪ್ಪಗೌಡ ಜಾಡಲದಿನ್ನಿ, ಬಸವರಾಜ್ ಪಾಟೀಲ್ ಅತ್ತನೂರು, ಚುಕ್ಕಿ ಶಿವಾನಂದ, ದರೂರ್ ಬಸವರಾಜ್, ರಾಮನಗೌಡ ಏಗನೂರು, ದಾನಮ್ಮ, ನಿರ್ಮಲಾ ಬೆಣ್ಣೆ, ಪ್ರತಿಭಾ ಗೋನಾಳ ಸೇರಿದಂತೆ ಇತರರಿದ್ದರು.