

ರಾಯಚೂರು: ಧರ್ಮ ಮತ್ತು ದೇವಸ್ಥಾನ ಕಾರ್ಯಕ್ರಮಗಳ ಪ್ರಸಾರಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ನಿಂದ ನಡೆಸಲಾಗುತ್ತಿರುವ ಎಸ್‌ಬಿವಿಸಿ ಚಾನಲ್ ಅನ್ನು ಶೀಘ್ರದಲ್ಲಿ ಬೆಂಗಳೂರು ಕೇಂದ್ರವಾಗಿಟ್ಟುಕೊಂಡು ಕನ್ನಡದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಟಿಟಿಡಿ ದಾಸ ಸಾಹಿತ್ಯ ಪ್ರಾಜಕ್ಟ್‌ನ ವಿಶೇಷಾಧಿಕಾರಿ ಪಂ.ಆನಂದತೀರ್ಥಾಚಾರ್ ಪಗಡಾಲ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟ್ರಸ್ಟ್‌ನಿಂದ ಈಗಾಗಲೇ ತೆಲುಗು ಮತ್ತು ತಮಿಳಿನಲ್ಲಿ ಪ್ರಸಾರವಾಗುತ್ತಿದ್ದು, ತಿಮ್ಮಪ್ಪನ ಭಕ್ತರು ಎಲ್ಲಡೆ ಹಾಗೂ ಎಲ್ಲ ಭಾಷೆಯವರಾಗಿರುವ ಕಾರಣ ಕನ್ನಡದಲ್ಲೂ ಚಾನಲ್ ಆರಂಭಿಸಲಾಗುತ್ತಿದೆ ಎಂದರು.
ಹರಿದಾಸರ ಕೀರ್ತನೆ, ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಯುವಜನರಲ್ಲಿ ಧರ್ಮ ಪ್ರಜ್ಞೆ ಮೂಡಿಸುವ ಕೆಲಸವನ್ನು ಚಾನಲ್ ಮೂಲಕ ಮಾಡಲಾಗುತ್ತಿದೆ. ಜತೆಗೆ ದೇವಸ್ಥಾನದಲ್ಲಿ ಬೆಳಗ್ಗೆ ಸುಪ್ರಭಾತದಿಂದ ಹಿಡಿದು ನಿತ್ಯದ ಶ್ರೀನಿವಾಸ ಕಲ್ಯಾಣೋತ್ಸವದ ನೇರ ಪ್ರಸಾರ ಬಿತ್ತರಿಸಲಾಗುವುದು. ಹರಿದಾಸ ಕೀರ್ತನೆಗಳನ್ನು ಎಲ್ಲರಿಗೂ ಮುಟ್ಟಿಸಬೇಕು ಎನ್ನುವ ನಿಟ್ಟಿನಲ್ಲಿ ಚಾನಲ್‌ನಲ್ಲಿ ದಾಸ ನಮನ ಗಾಯನ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಹರಿದಾಸರ ನಾಡಾದ ರಾಯಚೂರಿನಿಂದ ಫೆಬ್ರವರಿಯಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಎಲ್ಲ ಜಿಲ್ಲೆಗಳಿಂದ 10 ಯುವಕ, ಯುವತಿಯರನ್ನು ಆಯ್ಕೆ ಮಾಡಿಕೊಂಡು ರಾಜ್ಯ ಮಟ್ಟದಲ್ಲಿ ಆಯ್ಕೆಯಾದವರಿಗೆ ಟ್ರಸ್ಟ್‌ನಿಂದ ಪಾರಿತೋಷಕ ನೀಡಲಾಗುವುದು ಎಂದರು. ಈ ಸಂದರ್ಭ ಬ್ರಾಹ್ಮಣ ಸಮಾಜದ ಮುಖಂಡರಾದ ತ್ರಿವಿಕ್ರಮ ಜೋಷಿ, ಮುರಳೀಧರ ಕುಲಕರ್ಣಿ, ಪ್ರಹ್ಲಾದ ಫಿರೋಜಾಬಾದ್ ಇದ್ದರು.