ಸಂಸ್ಕೃತಿಯಲ್ಲಿ ಕರ್ನಾಟಕ ಶ್ರೀಮಂತ ನಾಡು: ಸಚಿವ ಶರಣಪ್ರಕಾಶ ಪಾಟೀಲ್ ಬಣ್ಣನೆ

IMG-20241101-WA0045
Published on
  • ಜಿಲ್ಲಾದ್ಯಂತ ಸಂಭ್ರಮದ ಕನ್ನಡ ರಾಜ್ಯೋತ್ಸವ

ರಾಯಚೂರು: ಕರ್ನಾಟಕ ರಾಜ್ಯ ಮತ್ತು ಕನ್ನಡ ಭಾಷೆಗೆ ಜಗತ್ತಿನಲ್ಲಿ ವಿಶೇಷವಾದ ಸ್ಥಾನಮಾನವಿದ್ದು, ರಾಯಚೂರು ಜಿಲ್ಲೆಯ ಕೋಟೆಗಳು, ಶಾಸನಗಳು ಹಾಗೂ ಐತಿಹಾಸಿಕತೆ ಇದಕ್ಕೆ ಸಾಕ್ಷಿಯಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಶುಕ್ರವಾರ ಮಾತನಾಡಿದರು.

ಕರ್ನಾಟಕ ಕೇವಲ ಭೂ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ನಾಡು, ನುಡಿಗಾಗಿ ಚಳುವಳಿಗಳು ನಡೆದು ಹೋಗಿವೆ. ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವ ಮೂಲಕ ಕರ್ನಾಟಕ ಸಂಸ್ಕೃತಿಯಲ್ಲಿ ಶ್ರೀಮಂತವಾದ ನಾಡಾಗಿದೆ ಎಂದರು.

ಬ್ರಿಟೀಷರ ಕಾಲದಲ್ಲಿ ಹರಿದು ಹಂಚಿ ಹೋಗಿದ್ದ ರಾಜ್ಯವನ್ನು ಒಂದಾಗಿಸಲು ಕರ್ನಾಟಕ ಏಕೀಕರಣ ಹೋರಾಟಕ್ಕೆ 1856ರಲ್ಲಿ ಚಾಲನೆ ನಿಡಲಾಯಿತು. ನೂರು ವರ್ಷಗಳ ಬಳಿಕ ನಿರಂತರ ಹೋರಾಟಗಳು ನಡೆದು 1956ರ ನ.1ರಂದು ಕನ್ನಡ ಭಾಷೆಯನ್ನು ಮಾತನಾಡುವ ವಿಶಾಲ ಮೈಸೂರು ರಾಜ್ಯ ಉದಯವಾಯಿತು ಎಂದರು.

ಹದಿನೇಳು ವರ್ಷಗಳವರೆಗೆ ಮೈಸೂರು ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ರಾಜ್ಯಕ್ಕೆ 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ಇಂದಿನವರೆಗೆ ಕರ್ನಾಟಕ ರಾಜ್ಯದಲ್ಲಿ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಬರಲಾಗಿದ್ದು, ಇದಕ್ಕಾಗಿ ಅನೇಕ ಹೋರಾಟಗಾರರ ಪಾತ್ರ ಮಹತ್ವದ್ದಾಗಿದೆ ಎಂದರು.

ಪ್ರಸ್ತುತ ರಾಜ್ಯ ಸರ್ಕಾರದಿಂದ ಕನ್ನಡ ಭಾಷೆ ಹಾಗೂ ಕರ್ನಾಟಕ ರಾಜ್ಯದ ಜಿಲ್ಲೆಗಳ ಅಭಿವೃದ್ಧಿಗೆ ವಿಶೆಷ ಯೋಜನೆಗಳು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಯಚೂರಿನಲ್ಲಿ ಗೋಕಾಕ್ ಚಳುವಳಿಯ ಹಿನ್ನೋಟ, ಮುನ್ನೋಟ ಕಾರ್ಯಕ್ರಮ, ಸಿಂಧನೂರಿನಲ್ಲಿ ನಾಡಹಬ್ಬ ದಸರಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮೊದಲು, ಪೊಲೀಸ್ ಇಲಾಖೆ, ಅಗ್ನಿಶಾಮಕ, ಗೃಹರಕ್ಷಕ ದಳ, ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಸಲಾಯಿತು. ನಂತರ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.

ನಗರ ಶಾಸಕ ಡಾ.ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಂಎಲ್ಸಿ ಎ.ವಸಂತಕುಮಾರ್, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಡಿಸಿ ಕೆ.ನಿತೀಶ, ಜಿ.ಪಂ ಸಿಇಒ ರಾಹುಲ ತುಕಾರಾಂ ಪಾಂಡ್ವೆ, ಎಸ್ಪಿ ಎಂ.ಪುಟ್ಟಮಾದಯ್ಯ, ಎಸಿ ಗಜಾನನ ಬಾಲೆ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net