

ರಾಯಚೂರು: ಕನ್ನಡ ಸಾಹಿತ್ಯ, ಕಲೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿರುವ ಹೊಸಮನಿ ಪ್ರಕಾಶನದ ಕಾರ್ಯ ಪ್ರಶಂಸನೀಯ ಎಂದು ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಹೊಸಮನಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ನೃಪತುಂಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಈ ನೆಲದ ಸಂಸ್ಕೃತಿಯ ಉಳಿವಿಗಾಗಿ ಅನೇಕ ಜನರು ಶ್ರಮಿಸಿದ್ದಾರೆ. ಅದರಂತೆ ಮುಂದಿನ ಪೀಳಿಗೆಗೆ ಕನ್ನಡ ಭಾಷೆ, ಸಂಸ್ಖತಿಯನ್ನು ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕನ್ನಡತನವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಬಸವರಾಜ ಸ್ವಾಮಿ, ಡಿ.ಎಚ್.ಕಂಬಳಿ, ಹೋರಾಟಗಾರ ರಾಘವೇಂದ್ರ ಕುಷ್ಟಗಿ, ಸಾಹಿತಿ ಭಗತರಾಜ ನಿಜಾಮಕಾರಿ, ಸಂಗೀತ ನಿರ್ದೇಶಕ ಕರಿಯಪ್ಪ , ಗಾಯಕ ಆಂಜನೇಯ್ಯ ಜಾಲಿಬೆಂಚಿ, ಗಡಿನಾಡು ಕನ್ನಡಿಗರ ಸಂಘದ ಉಪಾಧ್ಯಕ್ಷ ಅಮರ್ ದೀಕ್ಷಿತ್, ಕಲಾವಿದರಾದ ರಘುಪತಿ ಪೂಜಾರ್, ಹೊಳೆಮ್ಮ, ಬಸ್ಸಮ್ಮ ಸೇರಿದಂತೆ ಇತರರಿಗೆ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಕಾಶನದ ಅಧ್ಯಕ್ಷ ಬಷೀರ್ ಅಹ್ಮದ್ ಹೊಸಮನಿ, ಉಪಾಧ್ಯಕ್ಷೆ ಪರ್ವಿನ್ ಬೇಗಂ, ಪ್ರಧಾನ ಕಾರ್ಯದರ್ಶಿ ಶಿಫಾ ಹೊಸಮನಿ, ಕೋಶಾಧ್ಯಕ್ಷೆ ಖುಷಿ ಹೊಸಮನಿ, ಲಿಯಾಕತ್ ಹೊಸಮನಿ ಸೇರಿದಂತೆ ಇತರರಿದ್ದರು.