

ರಾಯಚೂರು: ರಾಯಚೂರು ಜಿಲ್ಲೆ ಆಂಧ್ರ ಮತ್ತು ತೆಲಂಗಾಣ ಗಡಿಯಲ್ಲಿರುವುದರಿಂದ ಇಲ್ಲಿ ತೆಲುಗು ಹಾಗೂ ಉರ್ದು ಭಾಷೆಯ ಪ್ರಭಾವವಿದೆ. ಯಾವುದೇ ಭಾಷೆಗೆ ವಿರೋಧ ಬೇಡ ಆದರೆ ಆಡಳಿತ ಭಾಷೆ ಕನ್ನಡವಾಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ಸಂಭ್ರಮ-50 ಅಂಗವಾಗಿ ಗೋಕಾಕ್ ಚಳವಳಿಯ ಹಿನ್ನೋಟ ಮತ್ತು ಮುನ್ನೋಟ ಸಮಾವೇಶವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ರಾಯಚೂರು ಜಿಲ್ಲೆ ಧೀರ್ಘಕಾಲ ನಿಜಾಮರ ಆಡಳಿತದಲ್ಲಿದ್ದ ಜಿಲ್ಲೆಯಾಗಿದೆ. ಇಲ್ಲಿ ಕನ್ನಡ ಭಾಷೆ ಸೇರಿದಂತೆ ಅನೇಕ ಭಾಷೆಯನ್ನು ಬಳಸಲಾಗುತ್ತದೆ. ಅನ್ಯ ಭಾಷೆಗಳನ್ನು ಬಳಸುವ ಜತೆಗೆ ಕನ್ನಡವನ್ನು ವ್ಯವಾಹಾರಿಕ ಭಾಷೆಯನ್ನಾಗಿ ಬಳಕೆ ಮಾಡಬೇಕಾಗಿದೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಬೇಕು ಎಂದು ತಿಳಿಸಿದರು.
ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣವಾಗಿ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರ ಇಡೀ ವರ್ಷ ಅನೇಕ ಸಂಭ್ರಮದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸರ್ಕಾರದ ಈ ಕಾರ್ಯಕ್ರಮಗಳಲ್ಲಿ ರಾಯಚೂರಿನಲ್ಲಿ ನಡೆಯುತ್ತಿರುವ ಗೋಕಾಕ್ ಚಳವಳಿ ಕಾರ್ಯಕ್ರಮವೂ ಒಂದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹಾದೇವಪ್ಪ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೊಸರಾಜು, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ಎಂಎಲ್ಸಿಗಳಾದ ಎ.ವಸಂತಕುಮಾರ್, ಶರಣೇಗೌಡ ಬಯ್ಯಪೂರ್, ಬಸನಗೌಡ ಬಾದರ್ಲಿ, ಚಂದ್ರಶೇಖರ್ ಪಾಟೀಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಪ್ರಮುಖರಾದ ಚಂದ್ರಕಾಂತ್ ಬಲ್ಲಿದ್, ಹನುಮಂತಪ್ಪ, ಬಸವರಾಜ್ ಪಾಟೀಲ್ ಇಟಗಿ, ಡಿಸಿ ಕೆ.ನಿತೀಶ್, ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಕೃಷಿ ವಿವಿ ಕುಲಪತಿ ಡಾ,ಎಂ ಹನುಮಂತಪ್ಪ ಸೇರಿದಂತೆ ಇತರರಿದ್ದರು.