ಕೊರತೆಗಳಲ್ಲೇ ಚಿಣ್ಣರಿಗೆ ತರಗತಿಗಳು

raichur lkg-ukg
Published on

ತುರಾತುರಿಯಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್

ಶಶಿಧರ ಅಂಗಡಿ


ರಾಯಚೂರು: ಈಗಾಗಲೇ ಶಾಲಾ ಕೊಠಡಿಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೇ ಪೂರ್ವ ಸಿದ್ಧತೆಯಿಲ್ಲದೆ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ 1008 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ-ಯುಕೆಜಿ) ತರಗತಿಗಳನ್ನು ಪ್ರಾರಂಭಿಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧವಾಗಿದ್ದು, ಉದ್ದೇಶ ಎಷ್ಟರಮಟ್ಟಿಗೆ ಈಡೇರಲಿದೆ ಎಂಬುದು ಕಾದು ನೋಡಬೇಕಿದೆ.

ಕೊಠಡಿಗಳನ್ನು ಸಿದ್ಧಪಡಿಸಿಕೊಳ್ಳುವ ಮೊದಲೇ ಪಠ್ಯಪುಸ್ತಕ, ಕಲಿಕಾ ಸಾಮಾಗ್ರಿ, ಕಲಿಕಾ ಕಿಟ್ ಸೇರಿದಂತೆ ಇತರ ಸೌಲಭ್ಯಗಳನ್ನು ಪೂರೈಸುವಂತೆ ಇಲಾಖೆಯ ಕಲಬುರಗಿ ಅಪರ ಆಯುಕ್ತ ಡಾ. ಎಸ್.ಆಕಾಶ್ ಅವರು ಸರ್ಕಾರಕ್ಕೆ ಈಗಾಗಲೇ ಕೋರಿದ್ದು, ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಿಂದ ಪೂರೈಸಲು ಸರ್ಕಾರ ಕ್ರಮ ಕೈಗೊಂಡಿದೆ. ಕಲಿಕಾ ಸಾಮಗ್ರಿ-ಕಿಟ್ ಖರೀದಿಗಾಗಿ 7.56 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಕಳುಹಿಸಲಾಗಿದೆ. ಒಟ್ಟಾರೆ ಎಲ್ಲ ಪ್ರಕ್ರಿಯೆಗಳು ತರಾತುರಿಯಲ್ಲಿ ನಡೆದಿದ್ದು ನೋಡಿದರೆ ಯೋಜನೆ ಸಂಪೂರ್ಣ ಅನುಷ್ಠಾನ ಎಷ್ಟರ ಮಟ್ಟಿಗೆ ಯಶಸ್ವಿ ಎಂಬ ಅನುಮಾನ ಮೂಡದೆ ಇರದು.

ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸರ್ಕಾರ ಆಯುಕ್ತರಿಗೆ ತಿಳಿಸಿದೆ. ತರಗತಿಗಳ ಪ್ರಾರಂಭದ ಕುರಿತು ಆಯಾ ಶಾಲೆಗಳ ಎಸ್‌ಡಿಎಂಸಿ ಹಾಗೂ ಶಿಕ್ಷಕರು ಪ್ರಚಾರ ಮಾಡಬೇಕು. ತರಗತಿಗಾಗಿ ಶಾಲೆಗಳಲ್ಲಿ ಒಂದು ಕೊಠಡಿ ಸಜ್ಜುಗೊಳಿಸಬೇಕು. ಆದರೆ, ಲಭ್ಯವಿರುವ ಕೊಠಡಿಗಳೇ ಸಂಪೂರ್ಣ ಶಿಥಿಲಾವಸ್ಥೆಗೆ ಬಂದು ತಲುಪಿದ್ದು, ಹೆಚ್ಚುವರಿ ತರಗತಿಗಳನ್ನು ನಡೆಸಿದ್ದಲ್ಲಿ ಕಷ್ಟಕಷ್ಟ ಎಂಬಂಥ ಪರಿಸ್ಥಿತಿಯಿದೆ. ಕೊಠಡಿಗಳ ಲಭ್ಯತೆ ನೋಡಿಕೊಂಡು ಮತ್ತು ಆಯಾ ಬಿಇಒಗಳು ಇಲಾಖೆಗೆ ಸೂಚಿಸಿದ ಶಾಲೆಗಳಿಗೆ ಮೇಲಧಿಕಾರಿಗಳು ಭೇಟಿ ನೀಡಿ, ಅಲ್ಲಿನ ಲೋಪದೋಷಗಳ ಮಾಹಿತಿ ಪಡೆದು ಸ್ಥಳ ಪರಿಶೀಲನೆ ಮಾಡಿದಾಗ ವಾಸ್ತವಾಂಶದ ಅರಿವಾಗಲಿದೆ. ಒತ್ತಡದಿಂದ ಸೂಚಿಸಿದ ಶಾಲೆಗಳಲ್ಲಿ ಎಲ್‌ಕೆಜಿ-ಯಕೆಜಿ ತರಗತಿಗಳನ್ನು ನಡೆಸುವುದು ನಗೆಪಾಟಲಿಗೀಡಾಗುವ ಸಾಧ್ಯತೆಗಳಿವೆ.

ಕೇಂದ್ರದಿಂದ ಅನುಮೋದನೆಯ ನಿರೀಕ್ಷೆ

ಭವಿಷ್ಯದಲ್ಲಿ ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಯೋಜನಾ ಅನುಮೋದನಾ ಮಂಡಳಿ(ಪಿಎಬಿ)ಯಿಂದ ಈ ಯೋಜನೆಗೆ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಅನುಮೋದನೆ ನಂತರ ರಾಜ್ಯ ಸರ್ಕಾರ ಮತ್ತು ಕೆಕೆಆರ್‌ಡಿಬಿ ಸೌಲಭ್ಯಗಳೊಂದಿಗೆ ಹೆಚ್ಚುವರಿಯಾಗಿ ಕೇಂದ್ರದಿಂದ ಅನುದಾನ ಮತ್ತು ಸೌಲಭ್ಯಗಳು ಸಿಗುವ ಸಾಧ್ಯತೆಗಳಿವೆ.

ಕಲ್ಯಾಣ ಕರ್ನಾಟಕದಲ್ಲಿನ ಸ್ಕೂಲ್‌ಗಳು

ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ 119, ಬೀದರ್ 98, ಕಲಬುರಗಿ 234, ಕೊಪ್ಪಳ 131, ರಾಯಚೂರು 190, ವಿಜಯನಗರ 142 ಹಾಗೂ ಯಾದಗಿರಿಯಲ್ಲಿ 94 ಶಾಲೆಗಳು ಸೇರಿದಂತೆ 1008 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ನಡೆಯಲಿವೆ.

ಶಿಕ್ಷಕ-ಆಯಾಗೆ ವೇತನ

ಈ ತರಗತಿಗಳಿಗೆ 10 ತಿಂಗಳ ಅವಧಿಗೆ ಒಬ್ಬ ಶಿಕ್ಷಕ ಹಾಗೂ ಒಬ್ಬ ಆಯಾ ನೇಮಕ ಮಾಡಿ, ಇಲಾಖೆಯಿಂದ ಶಿಕ್ಷಕರಿಗೆ ಮಾಸಿಕ 10 ಸಾವಿರ ರೂ. ಹಾಗೂ ಆಯಾಗಳಿಗೆ ಮಾಸಿಕ ಐದು ಸಾವಿರ ರೂ. ವೇತನ ಶಾಲಾ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ. ಶಿಕ್ಷಕ-ಆಯಾ ನೇಮಕ ಮತ್ತು ವೇತನ ಕೊಡಿಸುವ ಜವಾಬ್ದಾರಿ ಆಯಾ ಶಾಲೆ ಎಸ್‌ಡಿಎಂಸಿ ಹಾಗೂ ಮುಖ್ಯ ಶಿಕ್ಷಕರದು.

ರಾಯಚೂರು ಜಿಲ್ಲೆಗೆ ಸಂಬಂಧ ಪಟ್ಟಂತೆ ಈಗಾಗಲೇ ಪೂರ್ವ ಪ್ರಾಥಮಿಕ ತರಗತಿಗಳ ಪ್ರಾರಂಭಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬಿಇಒಗಳಿಂದ ಶಾಲೆಗಳ ಮಾಹಿತಿ ಪಡೆದು, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶಿಕ್ಷಕ ಹಾಗೂ ಆಯಾ ನೇಮಕ ಪ್ರಕ್ರಿಯೆ ಮತ್ತು ಶಿಕ್ಷಕರಿಗೆ ತರಬೇತಿ ನೀಡಿ ಶೀಘ್ರವೇ ಆರಂಭಿಸಲಾಗುವುದು.|ಕೆ.ಡಿ ಬಡಿಗೇರ ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ, ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net