ಕ.ಕ.ಅಭಿವೃದ್ಧಿಗೆ ರೂ.1,493 ಕೋಟಿ ಮೀಸಲು; ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾಹಿತಿ

17092021 Raichur KK Ustava
Published on

ಕಲ್ಯಾಣ ಕರ್ನಾಟಕ ಉತ್ಸವಲ್ಲಿ ರಾಷ್ಟ್ರ ಧ್ವಜಾರೋಹಣ | ಸಶಸ್ತ್ರ ಮೀಸಲು ಪಡೆಯಿಂದ ಗೌರವ ವಂದನೆ

ರಾಯಚೂರು: ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ 2 ವರ್ಷಗಳಲ್ಲಿ 2,632 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಪ್ರಸಕ್ತ ಸಾಲಿನಲ್ಲಿ 1,493 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.

ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಶುಕ್ರವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಎಲ್ಲರಿಗೂ ಕೋವಿಡ್ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 9.98 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಕರೊನಾ ಎರಡನೇ ಅಲೆಯನ್ನು ಒಗ್ಗಟ್ಟಾಗಿ ಎದುರಿಸಿದ್ದು, ಮೂರನೇ ಅಲೆ ತಡೆಗೆ ಹೆಚ್ಚಿನ ಮುಂಜಾಗ್ರತೆ ವಹಿಸಲಾಗುತ್ತಿದೆ. ವಿಮಾನ ನಿಲ್ದಾಣ ನಿರ್ಮಾಣದ ಕನಸು ನನಸಾಗುವ ಹಂತಕ್ಕೆ ಬಂದಿದೆ. ಏಗನೂರು ಬಳಿ ನಿಲ್ದಾಣಕ್ಕಾಗಿ ಸರ್ವೇ ಕಾರ್ಯ ನಡೆಯುತ್ತಿದೆ. ಕೆಕೆಆರ್‌ಡಿಬಿಯಿಂದ 40 ಕೋಟಿ ರೂ. ಅನುದಾನ ಹಾಗೂ ಡಿಎಂಎಫ್ ಅಡಿಯಲ್ಲಿ 10 ಕೋಟಿ ರೂ. ನೀಡಲಾಗಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ ಎಂದರು.

ಸಶಸ್ತ್ರ ಮೀಸಲು ಪಡೆ ಸೇರಿ ವಿವಿಧ ತಂಡದಿಂದ ಗೌರವ ವಂದನೆ ಸಲ್ಲಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕಮ್, ಅಪರ ಜಿಲ್ಲಾಧಿಕಾರಿ ಕೆ.ಆರ್.ದುರಗೇಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಇದ್ದರು.

ಜನಪ್ರತಿನಿಧಿಗಳ ಗೈರು: ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹಾಲಪ್ಪ ಆಚಾರ್ ಕೊಪ್ಪಳದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ನಗರದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗವಹಿಸದೆ ಗೈರು ಹಾಜರಾಗಿರುವುದು ಎದ್ದು ಕಂಡು ಬರುತ್ತಿತ್ತು. ನಗರ ಶಾಸಕ ಡಾ.ಶಿವರಾಜ ಪಾಟೀಲ್ ನಗರದಲ್ಲಿದ್ದರೂ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಸಚಿವರು ಆಗಮಿಸಿದಾಗ ತಂಡೋಪ ತಂಡವಾಗಿ ಬರುತ್ತಿದ್ದವರು ಇಂದು ಇತ್ತ ಸುಳಿಯಲಿಲ್ಲ.

ದೇಶಕ್ಕೆ ಸ್ವಾತಂತ್ರೃ ಬಂದರೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರೃ ಸಿಕ್ಕಿರಲಿಲ್ಲ. ಅನೇಕ ಮಹನೀಯರ ಹೋರಾಟ, ಬಲಿದಾನದಿಂದ ನಮಗೆ ಸ್ವಾತಂತ್ರೃ ಸಿಕ್ಕಿತು. ಅವರ ದೇಶಪ್ರೇಮ ಯುವಕರಿಗೆ ಸ್ಪೂರ್ತಿಯಾಗಬೇಕು. ದೇಶದ ಭವ್ಯತೆ, ಪಾವಿತ್ರೃತೆಯ ಬಗ್ಗೆ ಯುವ ಜನರಲ್ಲಿ ಅರಿವು ಮೂಡಿಸುವ ಮೂಲಕ ಅವರಲ್ಲಿ ದೇಶಪ್ರೇಮ ಉಕ್ಕಿ ಹರಿಯುವಂತೆ ಮಾಡಿದಾಗ ಮಾತ್ರ ದೇಶ ಬಲಿಷ್ಠ ರಾಷ್ಟ್ರವಾಗಿ ನಿರ್ಮಾಣವಾಗಲು ಸಾಧ.| ಡಾ.ಬಿ.ಸಿಸತೀಶ ರಾಯಚೂರು ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net