

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿ ಆರಂಭ ಮಾಡದಿರಲು ಒತ್ತಾಯಿಸಿ ಕರ್ನಾಟಕ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಬುಧವಾರ ನಗರ ಮತ್ತು ಗ್ರಾಮಾಂತರ ಶಾಸಕರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
3 ರಿಂದ 6 ವರ್ಷದೊಳಗಿನ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳೆವಣಿಗೆಗಾಗಿ 1976ರಲ್ಲಿ ಪೌಷ್ಟಿಕ ಆಹಾರ ಮತ್ತು ಅಗತ್ಯ ಶಿಕ್ಷಣ ನೀಡಲು ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವುದರಿಂದ ಕೇಂದ್ರಗಳು ಕ್ರಮೇಣ ಮುಚ್ಚಬೇಕಾಗುತ್ತದೆ. ಶಿಕ್ಷಣ ಇಲಾಖೆಯಲ್ಲಿ ಕೇವಲ ಶಿಕ್ಷಣದ ಕಡೆಗೆ ಮಾತ್ರ ಗಮನ ಹರಿಸಲಿದೆ. ಹೀಗಾಗಿ ಮಕ್ಕಳಲ್ಲಿ ಹೆಚ್ಚಿನ ಅಪೌಷ್ಟಿಕತೆ ಉಂಟಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕೆಕೆಆರ್‌ಡಿಬಿಯಿಂದ ಹೊರಡಿಸಲಾಗಿರುವ ಎಲ್.ಕೆ.ಜಿ, ಯು.ಕೆ.ಜಿಯ ಆರಂಭದ ಆದೇಶವನ್ನು ನಿಲ್ಲಿಸಬೇಕು. 1008 ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಅಲ್ಲಿಯೇ ತರಗತಿಗಳನ್ನು ಆರಂಭಿಸಲು ಕ್ರಮಕೈಗೊಳ್ಳಬೇಕು. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಪೂರ್ವ ಪ್ರಾಥಮಿಕ ತರಗತಿಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಬೇಕು. ವರದಿ ಬರುವವರೆಗೂ ತರಗತಿಗಳನ್ನು ಆರಂಭಿಸಬಾರದು. ಬೇಡಿಕೆ ಈಡೇರಿಸದಿದ್ದರೆ ಸಂಘ ಸಂಸ್ಥೆಗಳೊಂದಿಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.