

ರಾಯಚೂರು: ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ನೀಡಿದ್ದ ಭರವಸೆಯಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಕಳಿಸಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಶಿವರಾಜ ಅಕ್ಕರಕಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿಗೆ ಶೇ.15 ಮೀಸಲಾತಿ ಅಥವಾ ಶೇ.17 ಮೀಸಲಾತಿ ಯಾವುದಾದರೂ ಒಂದನ್ನು ಒಪ್ಪಿಕೊಂಡು ಸದಾಶಿವ ಆಯೋಗದ ವರದಿಯ ಶಿಫಾರಸುಗಳ ಜಾರಿಗೆ ಕ್ರಮಕೈಗೊಳ್ಳಬೇಕು ಎಂದರು.
ಹಿಂದಿನ ಬಿಜೆಪಿ ಸರ್ಕಾರ ಕೊನೆಯ ಅವಧಿಯಲ್ಲಿ ಒಳ ಮೀಸಲಾತಿ ಶಿಫಾರಸುಗಳ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಿರುವುದಾಗಿ ಹೇಳಿಕೊಂಡಿತ್ತು. ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಶಿಾರಸ್ಸಿನಂತೆ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರ ಸದಾಶಿವ ಆಯೋಗ ವರದಿಯ ಶಿಫಾರಸುಗಳನ್ನು ಪರಿಗಣಿಸದೆ ಅಸ್ಪಷ್ಟವಾಗಿ ಕೇಂದ್ರ ಸರ್ಕಾರಕ್ಕೆ ಶಿಾರಸ್ಸು ಮಾಡಿತ್ತು. ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗೆ ಶೇ.15 ಹಾಗೂ ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯಂತೆ ಶೇ.17 ಮೀಸಲಾತಿ ಕುರಿತು ಗೊಂದಲ ಸೃಷ್ಟಿಸದೆ ಒಂದನ್ನು ಪರಿಗಣಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಕೂಡಲೇ ಈ ಕುರಿತ ಕಾನೂನು ತಿದ್ದುಪಡಿಗೆ ಮುಂದಾಗಬೇಕು. ಎಸ್‌ಇಪಿ ಯೋಜನೆಯಡಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಬೇಕು. ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನನ್ನು 7ಡಿ ಕಲಂ ಅಡಿ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳುವುದನ್ನು ರದ್ದುಗೊಳಿಸಬೇಕು ಎಂದು ಶಿವರಾಯ ಅಕ್ಕರಕಿ ಒತ್ತಾಯಿಸಿದರು. ಸಮಿತಿ ಕಾರ್ಯದರ್ಶಿ ಸೋಮು ಚೂರಿ, ಪದಾಧಿಕಾರಿಗಳಾದ ಆಂಜನೇಯ ಉಟ್ಕೂರು, ಅಬ್ರಹಾಂ ಕಮಲಾಪುರು, ಹನುಮಂತಪ್ಪ ಅಕ್ಕರಕಿ, ತಪನ ಕುಮಾರ, ಅಶೋಕ ನಡಗೇರಿ ಉಪಸ್ಥಿತರಿದ್ದರು.