

ರಾಯಚೂರು: ಪತ್ರಕರ್ತರೆಂದು ಹೇಳಿಕೊಂಡು ಅಮಾನತ್ತುಗೊಂಡ ಶಿಕ್ಷಕನನ್ನು ಬೆದರಿಸಿ ನಗದು ಚಿನ್ನಾಭರಣವನ್ನು ಕಿತ್ತುಕೊಂಡ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ರಾಯಚೂರಿನಲ್ಲಿ ಸೋಮವಾರ ಜರುಗಿದೆ.
ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ಅ.3ರಂದು ಪರಶುರಾಮ, ನರಸಿಂಹಲು, ರಾಮು ಹಾಗೂ ನರಸಪ್ಪ ಎಂಬುವವರು ತಾವು ಪತ್ರಕರ್ತರೆಂದು ಹೇಳಿಕೊಂಡು, ಸೇವೆಯಿಂದ ಅಮಾನತ್ತುಗೊಂಡ ಶಿಕ್ಷಕ ಸುರೇಂದ್ರ ಮನೆಗೆ ಬಂದು ನೀನು ಸೇವೆಯಲ್ಲಿದ್ದ ಸಂದರ್ಭದಲ್ಲಿ ಶಿಕ್ಷಕಿಯೊಬ್ಬರೊಂದಿಗೆ ಮಾಡಿದ ಅಸಭ್ಯ ವರ್ತನೆ ಕುರಿತು ಪತ್ರಿಕೆ ಮತ್ತು ಟಿವಿಗಳಲ್ಲಿ ಹಾಕಿ ನಿನ್ನ ಮಾನ ಕಳೆಯುತ್ತೇವೆ ಎಂದು ಬೆದರಿಸಿ 10 ಲಕ್ಷ ರೂ.ಹಣದ ಬೇಡಿಕೆ ಇಟ್ಟಿದ್ದಾರೆ.
ಶಿಕ್ಷಕ ನನ್ನ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದಾಗ ಮನೆಯ ಬಾಗಿಲು ಕಿಟಕಿ ಮುಚ್ಚಿ ಶಿಕ್ಷಕನನ್ನು ಥಳಿಸಿದ್ದಾರೆ. ನಂತರ ಶಿಕ್ಷಕನಲ್ಲಿದ್ದ 50 ಸಾವಿರ ನಗದು ಹಾಗೂ 1.20 ಲಕ್ಷ ಬೆಲೆಬಾಳುವ ಚಿನ್ನಾಭರಣವನ್ನು ಕಿತ್ತುಕೊಂಡು ಉಳಿದ ಹಣವನ್ನು ಸೋಮವಾರ ನೀಡಬೇಕೆಂದು ಎಚ್ಚರಿಸಿ ಹೋಗಿದ್ದಾರೆ.
ಈ ಬಗ್ಗೆ ವಿಷಯ ತಿಳಿದ ಪೊಲೀಸರು. ಖಚಿತ ಮಾಹಿತಿಯೊಂದಿಗೆ ರಾಯಚೂರು ನಗರದ ಆರ್‌ಟಿಒ ವೃತ್ತದಲ್ಲಿ ಸೋಮವಾರ ಹಣವನ್ನು ಅಮಾನತ್ತುಗೊಂಡ ಶಿಕ್ಷಕನ ಮೂಲಕ ಕಳಿಸಿ ರೋಪಿಗಳನ್ನು ಹಿಡಿದಿದ್ದಾರೆ. ನಾಲ್ಕು ಜನರ ಪೈಕಿ ಪರಶುರಾಮ್, ನರಸಿಂಹಲು ಸಿಕ್ಕಿಹಾಕಿಕೊಂಡಿದ್ದು, ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.