ಬಿಜೆಪಿ, ಕಾಂಗ್ರೆಸ್‌ನಿಂದ ಧರ್ಮಾಧಾರಿತ ರಾಜಕೀಯ; ಜೆಡಿಎಸ್ ಎಂಎಲ್‌ಸಿ ಟಿ.ಎ.ಶರಣವಣ ಆರೋಪ

19082022 t a sharavan
Published on

ರಾಯಚೂರು: ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳು ಹಾಗೂ ಬಿಜೆಪಿ, ಕಾಂಗ್ರೆಸ್ ಕುತಂತ್ರ ರಾಜಕಾರಣವನ್ನು ನಾಡಿನ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಜೆಡಿಎಸ್ ಎಂಎಲ್‌ಸಿ ಟಿ.ಎ.ಶರವಣ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಮತ್ತು ಕಾಂಗ್ರೆಸ್ ಧರ್ಮಾಧಾರಿತ ರಾಜಕೀಯ ಮಾಡುತ್ತಿದ್ದು, ಚುನಾವಣೆ ವರ್ಷವಾಗಿರುವುದರಿಂದ ಇಂತಹ ಆಟವಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದರು. ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದು ತೀವ್ರ ಖಂಡನೀಯ. ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳಬೇಕಿದೆ. ಕೊಡಗಿನಲ್ಲಿ ಸಿದ್ದರಾಮಯ್ಯಗೆ ಅವಮಾನ ಮಾಡಿದ್ದು ಸರಿಯಲ್ಲ. ಯಾವುದೇ ನಾಯಕರಿಗೂ ಅವಮಾನ ಮಾಡುವ ಮೂಲಕ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ರಾಜಕೀಯ ದಾಳಕ್ಕೆ ಯುವಕರು ಬಲಿಯಾಗಬಾರದು ಎಂದರು.

ರಾಯಚೂರನ್ನು ತೆಲಂಗಾಣಕ್ಕೆ ಸೇರ್ಪಡೆ ಮಾಡುವ ಕುರಿತು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಹೇಳಿಕೆ ಖಂಡನೀಯ. ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಹೇಳುವಾಗ ರಾಯಚೂರು ನಗರ ಶಾಸಕಗೆ ಪರಿಜ್ಞಾನ ಇರಲಿಲ್ವಾ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ರಾಯಚೂರನ್ನು ಅಭಿವೃದ್ಧಿ ಮಾಡಬೇಕಾಗಿತ್ತು. ಅದು ಬಿಟ್ಟು ಸಚಿವರ ಮುಂದೆ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಅಂತ ಹೇಳಿದ್ದು ಸರಿಯಲ್ಲ. ಯಾವುದೇ ಕಾರಣಕ್ಕೂ ರಾಯಚೂರು ತೆಲಂಗಾಣಕ್ಕೆ ಸೇರಿಸಲು ಜೆಡಿಎಸ್ ಬಿಡಲ್ಲ.

ಮುಂದಿನ ಬಾರಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬರಲಿದೆ ಎಂದು ಟಿ.ಎ.ಶರವಣ ವಿಶ್ವಾಸ ವ್ಯಕ್ತಪಡಿಸಿದರು. ಪ್ರಮುಖರಾದ ಲಕ್ಷ್ಮೀಪತಿ ಗಾಣಧಾಳ, ಎನ್.ಶಿವಶಂಕರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net