

ರಾಯಚೂರು: ಶಾಸಕ ಕೆ.ಶಿವನಗೌಡ ನಾಯಕ ಅಧಿಕಾರ ದುರುಪಯೋಗ ಪಡಿಸಿಕೊಂಡು ದೇವದುರ್ಗ ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಜಿ.ಕರೆಮ್ಮ ನಾಯಕ, ಅವರ ಮಗಳು ಹಾಗೂ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿರುವುದನ್ನು ಖಂಡಿಸಿ ನ.4ರಂದು ದೇವದುರ್ಗದಲ್ಲಿ ಪ್ರಜಾಪ್ರಭುತ್ವ ಉಳಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರೆಮ್ಮ ನಾಯಕ ಮೇಲೆ ಹಲ್ಲೆ ಮಾಡುವಂತೆ ಶಾಸಕ ಶಿವನಗೌಡ ನಾಯಕ ತಮ್ಮ ಹಿಂಬಾಲಕರಿಗೆ ಪ್ರಚೋದನೆ ನೀಡಿದ್ದಾರೆ. ಕರೆಮ್ಮ ನಾಯಕ ಹಾಗೂ ಅವರ ಮಗಳ ಕೈ ಹಿಡಿದು ಎಳೆಯಲಾಗಿದೆ. ಈ ಬಗ್ಗೆ ಎಸ್ಪಿಗೆ ದೂರು ನೀಡಿದ್ದರೂ ಶಾಸಕ ಶಿವನಗೌಡ ನಾಯಕ ಹಾಗೂ ಹಲ್ಲೆಕೋರರ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.
ಜೆಡಿಎಸ್ ಅಭ್ಯರ್ಥಿ ಜಿ.ಕರೆಮ್ಮ ನಾಯಕ ಮಾತನಾಡಿ, ಶಾಸಕ ಶಿವನಗೌಡ ನಾಯಕರ ಗೊಡ್ಡು ಬೆದರಿಕೆಗಳಿಗೆ ಹೆದುವುದಿಲ್ಲ ಎಂದರು. ಜೆಡಿಎಸ್ ದೇವದುರ್ಗ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್, ಪ್ರಮುಖರಾದ ಯೂಸೂಫ್ ಖಾನ್, ರಾಜನಗೌಡ ಇದ್ದರು.