

ಬಸ್ ಪ್ರಯಾಣಿಕರ ಸಂಖ್ಯೆ ಕಡಿತ
ರಾಯಚೂರು: ಕರೊನಾ ಸೋಂಕು ಹಬ್ಬುವಿಕೆ ನಿಯಂತ್ರಿಸಲು 14 ದಿನಗಳ ಜನತಾ ಕರ್ಫ್ಯೂ ಜಾರಿಗೊಳಿಸಿದ್ದರೂ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿರುವುದು ಮಂಗಳವಾರ ಕಂಡು ಬಂತು.
ಮಹಾವೀರ ವೃತ್ತ, ತೀನ್ ಕಂದೀಲ್ ವೃತ್ತ, ಚಂದ್ರಮೌಳೇಶ್ವರ ವೃತ್ತದಲ್ಲಿ, ಬಟ್ಟೆ ಬಜಾರ್‌ನಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ಬುಧವಾರದಿಂದ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದರಿಂದ ಜನರು ಅಗತ್ಯ ಸಾಮಗ್ರಿ ಖರೀದಿಗೆ ಜಮಾಯಿಸಿದ್ದರು. ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದ್ದರೂ ಬಟ್ಟೆ ಅಂಗಡಿಗಳನ್ನು ತೆರೆಯಲಾಗಿತ್ತು.
ಬೆಳಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರೂ ಅಂಗಡಿಗಳಿಗೆ ಮುಗಿಬಿದ್ದ ಜನರಿಗೆ ಅಂಗಡಿಗಳ ಮುಂದೆ ನೆರೆದಿದ್ದ ಲಾಠಿ ತೋರಿಸಿ ಚದುರಿಸಿದರು. ಅಂಗಡಿ ಮುಚ್ಚದಿದ್ದರೆ ದೂರು ದಾಖಲಿಸುವುದಾಗಿ ಬಟ್ಟೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಪ್ರಮುಖ ರಸ್ತೆಗಳ ವಾಹನ ಸಂಚಾರ ಹೆಚ್ಚಾಗಿದ್ದರಿಂದ ನಗರದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ತೆರವಿಗೆ ಪೊಲೀಸರು ಹೆಣಗಾಡಬೇಕಾಯಿತು. ಮಧ್ಯಾಹ್ನದ ನಂತರ ವಾಹನ ಸಂಚಾರ ಕಡಿಮೆಯಾಯಿತು.
24 ಅಂಗಡಿಗಳ ವಿರುದ್ಧ ದೂರು: ಕರೊನಾ ಮಾರ್ಗಸೂಚಿ ಉಲ್ಲಂಘಿಸಿದ 24 ಅಂಗಡಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತ ವೆಂಕಟೇಶ ಸದರ್ ಬಜಾರ್ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ. ಕರೊನಾ ಮಾರ್ಗಸೂಚಿ ಪಾಲನೆ ಮಾಡುವಂತೆ, ಅಗತ್ಯ ವಸ್ತುಗಳ ಅಂಗಡಿಗಳನ್ನು ಬಿಟ್ಟು ಇತರ ಅಂಗಡಿಗಳನ್ನು ತೆರೆಯದಂತೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದ್ದರೂ ಕೆಲ ಅಂಗಡಿ ಮಾಲೀಕರು ಮಾರ್ಗಸೂಚಿ ಉಲ್ಲಂಘಿಸಿದ್ದಾರೆ. ಅಮಥವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.