ಬಾಂಗ್ಲಾದೇಶದ ಹಿಂದುಗಳ ರಕ್ಷಿಸಿ; ಇಸ್ಕಾನ್ ಪದಾಧಿಕಾರಿಗಳ ಒತ್ತಾಯ

22102021 Raichur ISKON workers protest
Published on

ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿಗೆ ಮನವಿ

ರಾಯಚೂರು: ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ದಾಳಿ ನಡೆಸುತ್ತಿದ್ದು, ಹಿಂದುಗಳಿಗೆ ನ್ಯಾಯ ಒದಗಿಸಲು ಹಾಗೂ ರಕ್ಷಣೆ ನೀಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಸ್ಕಾನ್ ಪದಾಧಿಕಾರಿಗಳು ಒತ್ತಾಯಿಸಿದರು.

ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿದರು. ಹಿಂದು ಧಾರ್ಮಿಕ ಕ್ಷೇತ್ರಗಳು ಮತ್ತು ದೇವಸ್ಥಾನಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರ ಬಾಂಗ್ಲಾದೇಶದ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಬಾಂಗ್ಲಾದೇಶದಲ್ಲಿರುವ ಇಸ್ಕಾನ್ ಮತ್ತು ದುರ್ಗಾದೇವಿಯ ಪೂಜೆ ನಡೆಸುತ್ತಿದ್ದ ಪೆಂಡಾಲ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ, ಹಲವರ ಮೇಲೆ ಹಲ್ಲೆ ನಡೆಸಿ, ಕೆಲವರನ್ನು ಕೊಲೆ ಮಾಡಿದ್ದಾರೆ. ಇಸ್ಕಾನ್‌ನ ಹಲವು ಭಕ್ತರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಹಿಂದುಗಳು, ಅವರ ದೇವಸ್ಥಾನಗಳ ಮೇಲೆ ದಾಳಿ ನಡೆಸುತ್ತಿರುವ ದುಷ್ಕರ್ಮಿಗಳನ್ನು ಬಾಂಗ್ಲಾ ಸರ್ಕಾರ ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕು. ಹಿಂದುಗಳಿಗೆ ಸೂಕ್ತ ರಕ್ಷಣೆ ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net