

ರಾಯಚೂರು: ರಾಯಚೂರು ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿನ ಅನೇಕ ಪ್ರಯೋಗಗಳನ್ನು ನಡೆಸಿದ ನೆಲವಾಗಿದ್ದು, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಜಿಲ್ಲೆಯ ಸಾಹಿತಿಗಳು ಹೊಸತನ್ನು ತರುವ ಪ್ರಯತ್ನ ನಡೆಸಿದ್ದಾರೆ ಎಂದು ಹಿರಿಯ ಸಾಹಿತಿ ವೀರಹನುಮಾನ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಏರ್ಪಡಿಸಿದ್ದ ಆಂಜಿನೇಯ ಜಾಲಿಬೆಂಚಿಯ ಬಿಟ್ಟು ಹೋದರು ಹೈಕು ಕವನ ಸಂಚಲನ ಬಿಡುಗಡೆಗೊಳಿಸಿ ಮಾತನಾಡಿ, ತತ್ತ್ವ ಪದ, ಬಂಡಾಯ ಮತ್ತು ಗಜಲ್ ಸಾಹಿತ್ಯದಲ್ಲಿ ಜಿಲ್ಲೆಯ ಸಾಹಿತಿಗಳು ಹಲವಾರು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ ಎಂದರು.
ಪ್ರಪಂಚದಲ್ಲಿ ಚಿಕ್ಕದಾದ ಕಾವ್ಯ ಪ್ರಕಾರದಲ್ಲಿ ಹೈಕು ಪ್ರಕಾರ ಒಂದಾಗಿದ್ದು, ಎಲ್ಲ ಭಾಷೆಗಳಲ್ಲಿಯೂ ಈ ಪ್ರಕಾರವನ್ನು ಕಾಣಬಹುದಾಗಿದೆ. ಆದರೆ ಹಲವು ಭಾಷೆಗಳಲ್ಲಿ ಹೈಕು ರಚನೆ ಕಷ್ಟಕರವಾಗಿದೆ. ಹೈಕು ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ಕೀರ್ತಿ ಜಪಾನ್‌ನ ಸಾಹಿತಿಗಳಿಗೆ ಸಲ್ಲುತ್ತದೆ.
ಜಪಾನ್ ಚಿಕ್ಕ ದೇಶವಾಗಿದ್ದರೂ 29 ನೋಬಲ್ ಪ್ರಶಸ್ತಿಗಳನ್ನು ಪಡೆದಿದ್ದು, ಮೂರು ಪ್ರಶಸ್ತಿಗಳು ಸಾಹಿತ್ಯ ಪ್ರಕಾರಕ್ಕೆ ಬಂದಿವೆ. ನಮ್ಮ ದೇಶದಲ್ಲಿ ರವೀಂದ್ರನಾಥ ಠಾಗೋರ ಮೊದಲು ಹೈಕು ರಚನೆ ಮಾಡಿದ್ದು, ನಂತರ ವಿವಿ ಭಾಷೆಗಳಲ್ಲಿ ಹೈಕು ರಚನೆ ಆರಂಭವಾಯಿತು ಎಂದು ವೀರಹನುಮಾನ ತಿಳಿಸಿದರು.
ಸಾಹಿತಿ ಅಯ್ಯಪ್ಪ ಹುಡಾ ಕೃತಿ ಕುರಿತು ಮಾತನಾಡಿ, ಮನುಷ್ಯನ ಸಂವೇದನೆ, ತಲ್ಲಣಗಳನ್ನು ಹೈಕುಗಳಲ್ಲಿ ಕಾಣಬಹುದಾಗಿದ್ದು, ಆಂಜಿನೇಯ ಜಾಲಿಬೆಂಚಿಯ ಹೈಕುಗಳಲ್ಲಿ ಬದುಕನ್ನು ನೋಡುವ ದೃಷ್ಟಿಕೋನವಿದ್ದು, ಕಾವ್ಯದಲ್ಲಿ ಮಾನವೀಯ ವೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.
ಬೆಂಗಳೂರು, ಧಾರವಾಡ, ಮೈಸೂರುನವರು ಬರೆದಿದ್ದೇ ಉತ್ಕೃಷ್ಟ ಸಾಹಿತ್ಯ ಎನ್ನುವ ಮನೋಭಾವ ಬಹುತೇಕರಲ್ಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಗಟ್ಟಿತನವುಳ್ಳ ಸಾಹಿತ್ಯ ರಚನೆಯಾಗಿದ್ದರೂ ವಿಮರ್ಷಕರು ನಮ್ಮ ಭಾಗದ ಸಾಹಿತಿಗಳ ಬಗ್ಗೆ ನಿರ್ಲಕ್ಷ ಧೋರಣೆ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಹಿತಿ ಡಾ.ಸರ್ವಮಂಗಳ ಸಕ್ರಿ ಮಾತನಾಡಿ, ಸರ್ವಜ್ಞರ ತ್ರಿಪದಿಗೆ ಹೋಲಿಕೆ ಹೈಕು ಪ್ರಕಾರದಲ್ಲಿ ಕಂಡು ಬರುತ್ತಿದ್ದು, ಚುಟುಕು ಕವಿತೆಗಳು ಇತ್ತೀಚಿನ ದಿನಗಳಲ್ಲಿ ಖ್ಯಾತಿ ಗಳಿಸುತ್ತಿದ್ದು, ಜಾಲಿಬೆಂಚಿಯವರ ಹೈಕುಗಳಲ್ಲಿ ಸೃಜನಶೀಲತೆಯನ್ನು ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಸಾಹಿತಿಗಳಾದ ರಘುನಾಥರೆಡ್ಡಿ ಮನ್ಸಲಾಪುರ, ಆಂಜಿನೇಯ ಜಾಲಿಬೆಂಚಿ ಉಪಸ್ಥಿತರಿದ್ದರು.