

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರಿಗೆ ನೀರೊದಗಿಸುವಲ್ಲಿ ಸರ್ಕಾರ ಮತ್ತು ಇಲಾಖೆಯ ಅಧಿಕಾರಿಗಳು ವಿಫಲವಾಗಿದ್ದು, ಇದರಿಂದ ರೈತರ ಬೆಳೆಗಳಿಗೆ ಹಾನಿ ಉಂಟಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ಅನಧಿಕೃತವಾಗಿ ನೀರು ಪಡೆದುಕೊಳ್ಳುತ್ತಿರುವ ಬಗ್ಗೆ ಈಗಾಗಲೇ ಸಿಎಂ, ಡಿಸಿಎಂ, ಸಚಿವರು ಹಾಗೂ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಸಮಸ್ಯೆ ಪರಿಹರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಆದರೆ ಈವರೆಗೂ ಸಮಸ್ಯೆ ಹಾಗೆಯೇ ಇದೆ ಆದ್ದರಿಂದ ಅ.4ರಂದು ಜಿಲ್ಲೆಗೆ ಸಿಎಂ ಆಗಮಿಸುವ ಬಗ್ಗೆ ಮಾಹಿತಿ ಇದ್ದು, ಅಂದು ಸಿಎಂಗೆ ೇರಾವ್ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಕಾಲುವೆಗೆ ನೀರು ಬಿಡಲಾಗಿದೆ ಆದರೆ ಕೊನೆ ಭಾಗಕ್ಕೆ ಇಂದಿಗೂ ನೀರು ಬಂದಿಲ್ಲ ಇದರಿಂದ ರೈತರು ಬೆಳೆದ ಭತ್ತದ ಬೆಳೆ ಹಾಳಾಗಿದೆ ಎಂದರು.ಈ ಸಂದರ್ಭದಲ್ಲಿ ಪ್ರಮುಖರಾದ ಬೂದಯ್ಯ ಸ್ವಾಮಿ, ಮಸ್ತಾನ್, ಭೀಮಣ್ಣ ನಾಯಕ ಸೇರಿದಂತೆ ಇತರರಿದ್ದರು.