

ರಾಯಚೂರು: ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡುವಲ್ಲಿ ಸರ್ಕಾರ ತೋರುತ್ತಿರುವ ವಿಳಂಬ ಧೋರಣೆಯನ್ನು ಖಂಡಿಸಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸುಪ್ರಿಂ ಕೋರ್ಟ್ ಒಳಮೀಸಲಾತಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿದೆ ಆದರೆ ರಾಜ್ಯ ಸರ್ಕಾರ ಮಾತ್ರ ಜಾರಗೊಳಿಸದೇ ನ್ಯಾಯಮೂರ್ತಿ ನಾಗಮೋಹನದಾಸ ನೇತೃತ್ವದಲ್ಲಿ ಆಯೋಗವನ್ನು ರಚಿಸಿ ಆಯೋಗಕ್ಕೆ ಸರಿಯಾದ ಮಾರ್ಗಸೂಚಿ ನೀಡದೇ ಸಮಯಹರಣ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಅಸಮಧಾನ ಹೊರಹಾಕಿದರು.
ಒಳ ಮೀಸಲಾತಿ ಜಾರಿಯಾಗುವವರೆಗೆ ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡದಂತೆ ಸಿಎಂ ಸೂಚನೆ ನೀಡಿದರೂ ಗೃಹ ಸಚಿವ ಜಿ.ಪರಮೇಶ್ವರ, ಗೃಹ, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ನೇಮಕಾತಿಗಳು ನಡೆಯಬೇಕೆಂದು ಸೂಚಿಸಿರುವುದು ಕಾಂಗ್ರೆಸ್ ನಾಯಕರ ಒಳಮನಸ್ಸಿನ ದ್ವಂದ್ವವನ್ನು ಎತ್ತಿ ತೋರಿಸುತ್ತದೆ. ಕೂಡಲೇ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗಾಗಿ ಆಯೋಗಕ್ಕೆ ಮಾರ್ಗಸೂಚಿಯನ್ನು ನೀಡಬೇಕು, ಆದಷ್ಟು ಶೀಘ್ರವೇ ಮೀಸಲಾತಿ ಜಾರಿಮಾಡಬೇಕು ಎಂದು ಒತ್ತಾಯಿಸಲಾಯಿತು.
ಈ ವೇಳೆ ಪ್ರಮುಖರಾದ ಎಸ್.ಮಾರೆಪ್ಪ, ಹೇಮರಾಜ್ ಅಸ್ಕಿಹಾಳ, ನರಸಿಂಹಲು ಮರ್ಚಟಾಳ, ಆಂಜನೇಯ್ಯ ಉಟ್ಕೂರು, ಶ್ರೀನಿವಾಸ ಕೊಪ್ಪರ, ಹುಲಿಗಪ್ಪ, ತಾಯಪ್ಪ, ಉರುಕುಂದಪ್ಪ, ನರಸಿಂಹಲು, ಎಂ.ಈರಣ್ಣ ಸೇರಿದಂತೆ ಇತರರಿದ್ದರು.