

ರಾಯಚೂರು: ಒಳಮೀಸಲಾತಿ ಜಾರಿ ಮಾಡುವಲ್ಲಿ ರಾಜ್ಯ ಸರ್ಕಾರ ತನ್ನ ವಿಳಂಬ ಧೋರಣೆಯನ್ನು ಮುಂದುವರೆಸಿದೆ ಎಂದು ಎಂಆರ್‌ಎಚ್‌ಎಸ್ ರಾಜ್ಯ ಗೌರವಾಧ್ಯಕ್ಷ ಎಸ್.ಮಾರೆಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ತೋರುತ್ತಿರುವ ನಿರ್ಲಕ್ಷೃತನದ ನಡೆಯನ್ನು ಖಂಡಿಸಿ ನ.29ರಂದು ಜಿಲ್ಲೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುಪ್ರಿಂ ಕೋರ್ಟ್ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವಂತೆ ಅಧಿಕಾರ ನೀಡಿದ್ದು, ರಾಜ್ಯ ಸರ್ಕಾರ ಮಾತ್ರ ನ್ಯಾಯಮೂರ್ತಿ ನಾಗಮೋಹನದಾಸ ನೇತೃತ್ವದ ಆಯೋಗ ರಚಿಸಿದೆ ಆದರೆ ಆಯೋಗಕ್ಕೆ ಬೇಕಾದ ಮಾರ್ಗ ಸೂಚಿಯನ್ನು ನೀಡದೇ ಆಯೋಗಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಿ ಕಾಲಹರಣ ಮಾಡಲಾಗುತ್ತಿದೆ ಎಂದರು.
ಒಳಮೀಸಲಾತಿ ಜಾರಿಯಾಗದೇ ರಾಜ್ಯದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬಾರದೆಂದು ಸಿಎಂ ಹೇಳಿದ್ದರೂ. ಗೃಹ ಸಚಿವ ಜಿ.ಪರಮೇಶ್ವರ ಗೃಹ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ನೇಮಕಾತಿಗಳನ್ನು ಅವಶ್ಯಕವಾಗಿ ನಡೆಸುವಂತೆ ಮನವಿ ಮಾಡಿದ್ದಾರೆ. ಒಳ ಮೀಸಲಾತಿಗೆ ವಿರೋಧವಿಲ್ಲ ಎಂದು ಹೇಳುವ ಕಾಂಗ್ರೆಸ್ ನಾಯಕರ ಒಳಮನಸ್ಸಿನ ಮಾತು ತಿಳಿಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹೇಮರಾಜ್ ಅಸ್ಕಿಹಾಳ, ನರಸಿಂಹಲು ಮರ್ಚಟಾಳ, ಆಂಜನೇಯ್ಯ ಉಟ್ಕೂರು, ಶ್ರೀನಿವಾಸ ಕೊಪ್ಪರ, ನರಸಿಂಹಲು, ತಾಯಪ್ಪ ಗಧಾರ, ಆಂಜನೇಯ್ಯ ಕುರಬದೊಡ್ಡಿ, ಎಸ್.ಹುಲಿಗೆಪ್ಪ, ಜಂಬಯ್ಯ ಸೇರಿದಂತೆ ಇತರರಿದ್ದರು.