

ರಾಯಚೂರು: ಒಳಮೀಸಲಾತಿ ಜಾರಿಗಾಗಿ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಮೂರು ತಿಂಗಳ ಕಾಲಮಿತಿಯನ್ನು ನಿಗದಿಪಡಿಸಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಲು ಹೊರಟಿರುವುದು ಖಂಡನೀಯ ಎಂದು ಒಳಮೀಸಲಾತಿ ಐಕ್ಯ ಹೊರಾಟ ಸಮಿತಿಯ ಸಂಚಾಲಕ ಎಂ.ವಿರೂಪಾಕ್ಷಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕೆಂಬ ಐಕ್ಯ ಹೋರಾಟ ಸಮಿತಿಯ ಒತ್ತಾಯಕ್ಕೆ ಮಣಿದು ಸೋಮವಾರ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ವಿಚಾರವನ್ನು ಪ್ರಸ್ತಾಪ ಮಾಡಿದೆ ಆದರೆ ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳದೇ ಮೂರು ತಿಂಗಳ ಕಾಲಾವಕಾಶ ತೆಗೆದುಕೊಳ್ಳುವ ಮೂಲಕ ಮತ್ತೆ ಕಾಲಹರಣ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಂದೆ ನಡೆಯಲಿರುವ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ನಿಶ್ಚಿತವಾಗಿ ಸೋಲಿಸಲು ಐಕ್ಯ ಹೊರಾಟ ಸಮಿತಿ ಹಾಗೂ ಮಾದಿಗ ಸಮುದಾಯ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸದೇ ರಾಜ್ಯ ಸರ್ಕಾರ ತನ್ನ ವಿಳಂಬಧೋರಣೆಯನ್ನು ಮುಂದುವರೆಸಿದ್ದು, ಒಳಮೀಸಲಾತಿ ಜಾರಗೊಳಿಸದೇ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಇದರಿಂದ ಮಾದಿಗ ಜನಾಂಗಕ್ಕೆ ಅನ್ಯಾಯವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರವೀಂದ್ರ ಜಲ್ದಾರ, ಜೆ.ಬಿ.ರಾಜು, ಮೌನೇಶ್, ಭೀಮಣ್ಣ, ಶಂಕ್ರಪ್ಪ, ವಿಕ್ರಮ ಸೇರಿದಂತೆ ಇತರರಿದ್ದರು.