

ರಾಯಚೂರು: ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀತಿಯು ಸಂವಿಧಾನ ಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದು, ರಾಜ್ಯ ಸರ್ಕಾರ ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತಾ ಕಾಲಹರಣ ಮಾಡುತ್ತಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕಳೆದ 30 ವರ್ಷಗಳಿಂದ ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿ ಸಮುದಾಯದವರು ಹೋರಾಟ ಮಾಡುತ್ತಲೇ ಬಂದಿದ್ದು, ಹೋರಾಟಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಸಾರ್ಥಕತೆಯನ್ನು ತಂದಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾತ್ರ ಒಳಮಿಸಲಾತಿ ಜಾರಿಗೊಳಸಿಲು ದುರುದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದು, ಸಮುದಾಯದ ಜನರಿಗೆ ನೋವನ್ನುಂಟು ಮಾಡಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಸುಪ್ರೀ ಕೋರ್ಟ್ ತೀರ್ಪಿನ ಬಳಿಕ ಇನ್ನಾವುದೇ ಹೆಚ್ಚುವರಿ ಸಮಿತಿ ರಚಿಸಿ, ತೀರ್ಮಾನ ಕೈಗೊಳ್ಳುವುದು ಸರಿಯಾದ ಕ್ರಮವಲ್ಲ. ಒಳಮೀಸಲಾತಿಯನ್ನು ಎಸ್ಸಿ ಪಟ್ಟಿಯಲ್ಲಿರುವ ಎಲ್ಲ ಉಪಪಂಗಡಗಳು ಸ್ವಾಗತಿಸಿದ್ದು, ರಾಜ್ಯದಲ್ಲಿ ಜಾರಿಗೊಳಿಸಲು ಉತ್ತಮ ವಾತಾವರಣ ನಿರ್ಮಾಣವಾಗಿದೆ. 15 ದಿನಗಳೊಳಗಾಗಿ ಒಳಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಆರ್.ಮುನಿಯಪ್ಪ, ವಾಸು, ಪ್ರಭು ದಳಪತಿ, ವೈ.ನರಸಪ್ಪ, ಆದನಗೌಡ, ಹಾಜೀಸಾಬ್, ವೆಂಕನಗೌಡ ಸೇರಿದಂತೆ ಇತರರಿದ್ದರು.